ಕುಣಿಗಲ್: ತಾಲ್ಲೂಕಿನ ಬಿಳಿದೇವಾಲಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ವಸತಿ ಯೋಜನೆಯಡಿ ಅವ್ಯವಹಾರಗಳು ನಡೆಯುತ್ತಿವೆ. ಇದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ವಸತಿ ಯೋಜನೆ ನೋಡಲ್ ಅಧಿಕಾರಿಗಳಿಗೆ ಶಾಸಕ ಡಿ.ನಾಗರಾಜಯ್ಯ ಸೂಚನೆ ನೀಡಿದರು.
ಶನಿವಾರ ತಾ.ಪಂ.ಸಭಾಂಗಣದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ತಾ.ಪಂ.ಸದಸ್ಯೆ ಮಂಜುಳಾ, ಮನೆ ನಿರ್ಮಿಸಿಕೊಂಡಿದ್ದರೂ ಫಲಾನುಭವಿಗಳಿಗೆ ಸಹಾಯ ಧನ ವಿತರಣೆಯಾಗಿಲ್ಲ. ಕೆಲ ಪಂಚಾಯಿತಿಗಳಲ್ಲಿ ಗ್ರಾ.ಪಂ.ಅಧ್ಯಕ್ಷ–ಕಾರ್ಯದರ್ಶಿಗಳ ಅಪವಿತ್ರ ಮೈತ್ರಿಯಿಂದ ಅರ್ಹರಿಗೆ ಸವಲತ್ತುಗಳು ದೊರೆಯುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ದುಡಿಯುವಂತೆ ಸೂಚಿಸಿದರು.
ಸುರ್ವಣ ಗ್ರಾಮ ಯೋಜನೆಯಡಿಯಲ್ಲಿ ಕಾಮಗಾರಿಗಳು ನಡೆದಿಲ್ಲ ಎಂದು ಹೇರೂರು ತಾ.ಪಂ ಸದಸ್ಯೆ ಮೋಹನಾಂಬ ಹೇಳಿದರು. ಇದಕ್ಕೆ ಶಾಸಕ, ಈ ಬಗ್ಗೆ ವಿಶೇಷ ಸಭೆ ನಡೆಸುವುದಾಗಿ ಹೇಳಿದರು. ಪಂಚಾಯಿತಿ ಸದಸ್ಯರ ಅನುದಾನದಡಿ 13 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆ ಡಾಂಬರೀಕರಣ ಹಾಗೂ 23 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆ ಮರು ಡಾಂಬರೀಕರಣಕ್ಕೆ ನಿರ್ಣಯ ಕೈಗೊಳ್ಳ-ಲಾಯಿತು.
ತಾ.ಪಂ. ಅಧ್ಯಕ್ಷ ನರಸಿಂಹ ಮೂರ್ತಿ, ಉಪಾಧ್ಯಕ್ಷ ಹನುಮಾನಾಯಕ, ಇಒ ಆಂಜನಪ್ಪ, ಜಿ.ಪಂ. ಸದಸ್ಯರಾದ ಡಾ.ಬಿ.ಎನ್.ರವಿ, ದೊಡ್ಡಯ್ಯ, ತಾ.ಪಂ.ಸದಸ್ಯರಾದ ವೆಂಕಟಲಕ್ಷ್ಮಮ್ಮ, ಕೆಂಪಗೂಳಿಗೌಡ, ಕಾಮನಹಳ್ಳಿ ರಾಮಣ್ಣ, ಲೋಕೇಶ್, ಎಇಇ ವಿಜಯ್ ಗೌಡ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.