ತುಮಕೂರು: ‘ತುಮಕೂರು ನಗರವು ಜಿಲ್ಲಾ ಕೇಂದ್ರವಾಗಿರುವುದರಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ವಿಶ್ವದಲ್ಲಿಯೇ ಉತ್ತಮವಾದ ಸ್ಮಾರ್ಟ್ ಹಾಸ್ಟೆಲ್ ಹಬ್ ನಿರ್ಮಿಸಬೇಕು’ ಎಂದು ಬಿಜೆಪಿ ಅಭಿವೃದ್ಧಿ ಮಾಹಿತಿ ಪ್ರಕೋಷ್ಠದ ರಾಜ್ಯ ಸಂಚಾಲಕ ಜಿ.ಎಸ್.ಬಸವರಾಜ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಇಂತಹ ಹಾಸ್ಟೆಲ್ ನಿರ್ಮಾಣಕ್ಕೆ ಸಲಹೆ ನೀಡಲಾಗಿದೆ’ ಎಂದು ತಿಳಿಸಿದರು.
’ಜಿಲ್ಲೆಯಲ್ಲೂ ವಿದ್ಯಾರ್ಥಿ ವಸತಿ ನಿಲಯಗಳ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಬಾಡಿಗೆ ಕಟ್ಟಡ ಲಾಬಿ ಹೆಚ್ಚಾಗಿದೆ. ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
’ರಾಜ್ಯದ ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಅಭಿವೃದ್ಧಿ ಮತ್ತು ಸೌಲಭ್ಯ ಕಲ್ಪಿಸುವ ಹೆಸರಿನಲ್ಲಿ ₹ 2,157 ಕೋಟಿ ಭ್ರಷ್ಟಾಚಾರವಾಗಿದೆ’ ಎಂದು ಆರೋಪಿಸಿದರು.
‘ಬಿಜೆಪಿಯು ರಾಜ್ಯದಲ್ಲಿನ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಕಲ್ಪಿಸಿದ ಸೌಲಭ್ಯಗಳ ಕುರಿತು ರಾಜ್ಯವ್ಯಾಪಿ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ’ ಎಂದು ತಿಳಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ರಮೇಶ್, ಕುಮಾರ್, ವಿಠಲ್, ಧನಿಯಾಕುಮಾಆರ್, ಕೃಷ್ಣಮೂರ್ತಿ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.