ADVERTISEMENT

ಸ್ವಾವಲಂಬನೆಯತ್ತ ಹೆಜ್ಜೆ...

ನಮ್ಮ ಊರು ನಮ್ಮ ಜಿಲ್ಲೆ

ಎಚ್.ಜೆ.ಪದ್ಮರಾಜು
Published 18 ಆಗಸ್ಟ್ 2013, 10:36 IST
Last Updated 18 ಆಗಸ್ಟ್ 2013, 10:36 IST

`ಟೀವಿ ಸೀರಿಯಲ್‌ಗಳಲ್ಲಿ ಹೆಂಗಸರು ಉಡುವ ಸೀರೆಗಳನ್ನು ಗಮನಿಸುತ್ತಾ ಕಸೂತಿ ಕಲಿಯುವ ಆಸೆಯಾಯಿತು. ಊರಿನಲ್ಲಿದ್ದ ಮಾರ್ವಾಡಿ ಮಹಿಳೆ ಬಳಿ ಹೇಳಿಕೊಂಡಾಗ ಆಕೆ ತನಗೆ ಗೊತ್ತಿದ್ದ ಕಲೆಯನ್ನು ಧಾರೆ ಎರೆದರು...'

-ಇದು ತೋವಿನಕೆರೆ ಗ್ರಾಮದ ಪುಷ್ಪಲತಾ, ಶೈಲಜಾ ಮಾತು. ಹೆಂಗಸರು ಟಿವಿ ನೋಡುವುದನ್ನೇ ಕಾಯಕವಾಗಿಸಿಕೊಂಡು ಕಾಲಹರಣ ಮಾಡುತ್ತಾರೆ ಎಂಬ ಮಾತಿನ ನಡುವೆ ಟಿವಿಯಿಂದಲೇ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಪಡೆದ ಇವರು ಭಿನ್ನವಾಗಿ ನಿಲ್ಲುತ್ತಾರೆ.

`ಕ್ಲಾತಿಂಗ್ ಅಂಡ್ ಎಂಬ್ರಾಯಿಡರಿ' ವಿಷಯದಲ್ಲಿ ಜೆಒಸಿ ಓದಿರುವ ಇದೇ ಗ್ರಾಮದ ಮಂಜಮ್ಮ ಸ್ವಂತ ಆಸಕ್ತಿಯಿಂದ ಫ್ಯಾಷನ್ ಡಿಸೈನಿಂಗ್ ಕಲಿತ್ತಿದ್ದಾರೆ. ಸೀರೆಗಳಿಗೆ ಸ್ಟೋನ್ ವರ್ಕ್, ಫ್ಯಾಬ್ರಿಕ್ ಪೇಂಟಿಂಗ್ ಮಾಡುವುದರಲ್ಲಿ ಸಿದ್ಧಹಸ್ತರು. ಇದೀಗ ಈ ಮೂವರು ಮಹಿಳೆಯರು ತೋವಿನಕೆರೆಯಲ್ಲಿ ಸ್ವಾವಲಂಬನೆಯ ಹೊಸ ಶಕೆಗೆ ನಾಂದಿ ಹಾಡಿದ್ದಾರೆ.

`ಬೆಂಗಳೂರು ರಾಜಾ ಮಾರ್ಕೆಟ್‌ನಲ್ಲಿ ಕಡಿಮೆ ದರಕ್ಕೆ ಕಚ್ಚಾ ವಸ್ತುಗಳು ಸಿಗುತ್ತವೆ. ಅಲ್ಲಿ ಬಟ್ಟೆಯನ್ನು ಥಾನ್ ಲೆಕ್ಕದಲ್ಲಿ, ಉಲ್ಲನ್-ವೈರ್‌ಗಳನ್ನು ಕೆ.ಜಿ. ಲೆಕ್ಕದಲ್ಲಿ ತರಬೇಕು. ಒಬ್ಬೊಬ್ಬರೆ ಹೋದರೆ ಕಷ್ಟ. ಹೀಗಾಗಿ ಒಟ್ಟಿಗೆ ಹೋಗಿ ಮಾಲು ತಂದು ಹಂಚಿಕೊಳ್ಳುತ್ತೇವೆ. ಥಾನ್‌ನಲ್ಲಿರುವ ಬಣ್ಣಗಳನ್ನು ಶೇರ್ ಮಾಡುವುದರಿಂದ ತೋರಣಗಳಲ್ಲಿ ವರ್ಣ ವೈವಿಧ್ಯತೆ ತರಲು ಅನುಕೂಲವಾಗುತ್ತದೆ' ಎನ್ನುತ್ತಾರೆ ಮಂಜಮ್ಮ.

ಉಲ್ಲನ್ ಶಾಲು, ವೈರ್‌ಬ್ಯಾಗ್, ಬಟ್ಟೆ ಬ್ಯಾಗ್, ನೆಲಹಾಸು, ಮೊಸರು ಕುಡಿಕೆ ಅಲಂಕಾರದ ಪ್ಲಾಸ್ಟಿಕ್ ತಂಬಿಗೆ, ಟೇಬಲ್ ಕ್ಲಾತ್ ಸೇರಿದಂತೆ ವೈವಿಧ್ಯಮಯ ಅಲಂಕಾರಿಕ ವಸ್ತುಗಳನ್ನು ಈ ಮಹಿಳೆಯರು ಸಿದ್ಧಪಡಿಸುತ್ತಾರೆ. ಅಂಗಡಿಗಳಿಂದ ಸಂಗ್ರಹಿಸಿ ತಂದ ತಂಪು ಪಾನೀಯಗಳ ಮುಚ್ಚಳದಿಂದ ಆಕರ್ಷಕ ತೂಗು ಹಾರ ಸಿದ್ಧಪಡಿಸಿದ್ದಾರೆ. ಹಳೆ ಸೀರೆಗಳು ವಿಶಿಷ್ಟ ವಿನ್ಯಾಸದ ಮ್ಯಾಟ್‌ಗಳಾಗಿವೆ. ಚಿತ್ತಾಕರ್ಷಕ ಕೌದಿಗಳೂ ಇವರ ಸಂಗ್ರಹದಲ್ಲಿವೆ.

ಮಂಜಮ್ಮ ಖಾದಿ ಗ್ರಾಮೋದ್ಯೋಗ ಇಲಾಖೆ ಹಾಗೂ ಓದೇಕಾರ್ ಫಾರಂನ ಅನಿತಾ ಓದೇಕಾರ್ ಅವರಿಂದ ಸೋಪಿನ ಪುಡಿ, ಫೆನಾಯಿಲ್, ಪಾತ್ರೆ ತೊಳೆಯುವ ಪುಡಿ ತಯಾರಿಕೆ ಕುರಿತು ತರಬೇತಿ ಪಡೆದಿದ್ದಾರೆ. ತುಮಕೂರಿನ ಜನ ಶಿಕ್ಷಣ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಲವು ಉಚಿತ ತರಬೇತಿ ಶಿಬಿರಗಳನ್ನು ಸಂಘಟಿಸಿದ್ದಾರೆ.


ಸ್ವಂತ ಆಸಕ್ತಿಯಿಂದ ಹಲವು ವಿನ್ಯಾಸ ಕಲಿತ ಈ ಕಲಾವಿದೆಯರ ಪಾಲಿಗೆ ಮಾರುಕಟ್ಟೆಯೇ ದೊಡ್ಡ ಸಮಸ್ಯೆಯಾಗಿದೆ. `ನಮಗೆ ತುಮಕೂರಿನಲ್ಲಿ ಯಾವುದೇ ಅಂಗಡಿಗಳ ಪರಿಚಯವಿಲ್ಲ. ಇಲ್ಲಿಗೆ ಬಂದು ಕೆಲವರು ಇಷ್ಟಪಟ್ಟ ವಸ್ತುಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ಖಾತ್ರಿ ಸಿಕ್ಕರೆ ಮತ್ತಷ್ಟು ಕೆಲಸ ಮಾಡಲು ಸಿದ್ಧ' ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.


ಆಸಕ್ತರು 9591867334 ಸಂಪರ್ಕಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.