ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಅಯ್ಯನಪಾಳ್ಯ ಗ್ರಾಮದ ಹೊರವಲಯದಲ್ಲಿ ಶುಕ್ರವಾರ 13 ಅಡಿ ಉದ್ದದ ಹೆಬ್ಬಾವು ಸೆರೆಯಾಗಿದೆ.
ಪುನೀತ್ ತಮ್ಮ ಮನೆಯ ಹಿತ್ತಲಲ್ಲಿ ಮೇವು ತರಲು ಹೋದಾಗ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ವಾರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಸಂಸ್ಥೆಯ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಹಾವು ಸೆರೆ ಹಿಡಿದರು. ಹೆಬ್ಬಾವು ನೋಡಲು ಗ್ರಾಮದ ಜನರು ಮುಗಿ ಬಿದ್ದಿದ್ದರು.
ಹೆಬ್ಬಾವು ಸೆರೆ ಸಿಕ್ಕ ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಬ್ಬಾವನ್ನು ವಶಕ್ಕೆ ಪಡೆದು ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
‘ಹಾವು ಇತರ ವನ್ಯಜೀವಿಗಳು ಜನ ವಸತಿ ಪ್ರದೇಶಕ್ಕೆ ಬಂದಾಗ ಯಾವುದೇ ತೊಂದರೆ ಕೊಡದೆ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮೊ 9916790692, 8748814569 ಸಂಪರ್ಕಿಸಬಹುದು’ ಎಂದು ಉರಗ ತಜ್ಞ ದಿಲೀಪ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.