ADVERTISEMENT

ತುಮಕೂರು: ಕೊಳಚೆ ನೀರು ಸಂಸ್ಕರಣೆಗೆ ₹135 ಕೋಟಿ

ಜಿಲ್ಲೆಯಲ್ಲಿ ‘ಜಲಶುದ್ಧಿ’ ಅಭಿಯಾನ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 5:59 IST
Last Updated 26 ಅಕ್ಟೋಬರ್ 2024, 5:59 IST
ತುಮಕೂರಿನಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಕೆಯುಐಡಿಎಫ್‍ಸಿ ಮುಖ್ಯ ಎಂಜಿನಿಯರ್ ನಂದೀಶ್, ಕೆಯುಐಡಿಎಫ್‍ಸಿ ವ್ಯವಸ್ಥಾಪಕ ನಿರ್ದೇಶಕ ಶರತ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಕೆಯುಐಡಿಎಫ್‍ಸಿ ಮುಖ್ಯ ಎಂಜಿನಿಯರ್ ನಂದೀಶ್, ಕೆಯುಐಡಿಎಫ್‍ಸಿ ವ್ಯವಸ್ಥಾಪಕ ನಿರ್ದೇಶಕ ಶರತ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಉಪಸ್ಥಿತರಿದ್ದರು   

ತುಮಕೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಜಲಶುದ್ಧಿ’ ಅಭಿಯಾನದಡಿ ಕೊಳಚೆ ನೀರಿನ ಸಂಸ್ಕರಣೆ, ಸ್ವಚ್ಛ ಭಾರತ್ ಮಿಷನ್, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಯೋಜನೆಯಲ್ಲಿ ₹135.23 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‍ಸಿ) ವ್ಯವಸ್ಥಾಪಕ ನಿರ್ದೇಶಕ ಶರತ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಈ ಮಾಹಿತಿ ನೀಡಿದರು. ತುಮಕೂರು ಮಹಾನಗರ ಪಾಲಿಕೆಗೆ ₹50 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಹುಳಿಯಾರು, ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಕೊಳಚೆ ನೀರಿನ ಸಂಸ್ಕರಣೆಗಾಗಿ ತಲಾ ₹3.50 ಕೋಟಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತುಮಕೂರು ಮಹಾನಗರ ಪಾಲಿಕೆ, ಶಿರಾ ನಗರಸಭೆ ಹೊರತುಪಡಿಸಿ ಜಿಲ್ಲೆಯ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ₹33.23 ಕೋಟಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಕುಣಿಗಲ್ ಪುರಸಭೆಗೆ ₹35 ಕೋಟಿ, ತಿಪಟೂರು ನಗರಸಭೆಗೆ ₹10 ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.

ADVERTISEMENT

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಲಮೂಲ ಸೇರುವುದನ್ನು ತಡೆಗಟ್ಟುವುದು, ಜಲ ಮಾಲಿನ್ಯ ನಿಯಂತ್ರಿಸುವುದು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ. ಯಾವುದೇ ರೀತಿಯಲ್ಲೂ ಸಂಸ್ಕರಿಸದ, ಮಲದ ಕೆಸರು, ಬಳಸಿದ ನೀರನ್ನು ಪರಿಸರಕ್ಕೆ ಬಿಡುವಂತಿಲ್ಲ. ಬಳಸಿದ ಎಲ್ಲಾ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂಸ್ಕರಿಸಿ, ಸಾಗಿಸುವ ಮೂಲಕ ಬಳಸಿದ ನೀರಿನ ನಿರ್ವಹಣೆ ಮಾಡಬೇಕು. ಸಂಸ್ಕರಿಸಿದ ನೀರಿನ ಮರುಬಳಕೆ ಮಾಡಬೇಕು. ಸಂಸ್ಕರಿಸದ ತ್ಯಾಜ್ಯ ನೀರು ಜಲಮೂಲ ಸೇರದಂತೆ ನಿಯಂತ್ರಿಸಬೇಕು ಎಂದು ಸೂಚಿಸಿದರು.

ಕೊಳಚೆ ನೀರು ಉತ್ಪಾದನೆ ಹಾಗೂ ಸಂಸ್ಕರಣೆ ನಡುವಿನ ಅಂತರ ಕಡಿಮೆ ಮಾಡಲು ಸರ್ಕಾರವು ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವನ್ನು ಅನುಷ್ಠಾನ ಇಲಾಖೆಯನ್ನಾಗಿ ಗುರುತಿಸಿದೆ. ಪ್ರಾಥಮಿಕ ಹಂತವಾಗಿ ಶಿರಾ ನಗರಸಭೆ ಹೊರತುಪಡಿಸಿ ಉಳಿದ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಸ್ಥಳ ಗುರುತಿಸುವಂತೆ ನಿರ್ದೇಶಿಸಿದರು.

ಹುಳಿಯಾರು, ಕೊರಟಗೆರೆಯಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ತಲಾ ₹3.5 ಕೋಟಿ ಮಂಜೂರು ಮಾಡಿ ಕಾರ್ಯಾದೇಶ ನೀಡಲಾಗಿದೆ. ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.

ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಕೆಯುಐಡಿಎಫ್‍ಸಿ ಮುಖ್ಯ ಎಂಜಿನಿಯರ್ ನಂದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.