ADVERTISEMENT

ನಿವೇಶನಕ್ಕೆ 176 ಎಕರೆ ಭೂಮಿ: ಶಾಸಕ ಡಾ.ರಂಗನಾಥ್ ಸೂಚನೆ

ವಿಂಗಡಣೆಗೆ ಗಮನಹರಿಸುವಂತೆ ಪಿಡಿಒಗಳಿಗೆ ಶಾಸಕ ಡಾ.ರಂಗನಾಥ್ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:11 IST
Last Updated 9 ಜುಲೈ 2024, 13:11 IST
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು   

ಕುಣಿಗಲ್: ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಲು 176 ಎಕರೆ ಭೂಮಿ ಗುರುತಿಸಲಾಗಿದ್ದು, ನಿವೇಶನಗಳ ವಿಂಗಡಣೆ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಡಾ.ರಂಗನಾಥ್ ಪಿಡಿಒಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಬಡವರಿಗೆ ಆಶ್ರಯ ನಿವೇಶನಗಳನ್ನು ಅಕ್ಟೋಬರ್ 2 ರಂದು ಹಂಚಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂದಾಯ ಅಧಿಕಾರಿಗಳು 175 ಎಕರೆ ಜಮೀನು ಗುರುತಿಸಿ 106 ಎಕರೆಯನ್ನು ಗ್ರಾಮ ಪಂಚಾಯಿತಿ ವಶಕ್ಕೆ ನೀಡಿದ್ದಾರೆ. ನಿವೇಶನಗಳನ್ನು 15ನೇ ಹಣಕಾಸು ಯೋಜನೆ ಸೇರಿದಂತೆ ರಾಜೀವ ಗಾಂಧಿ ವಸತಿ ನಿಗಮದಿಂದ ಕ್ರಮಬದ್ಧವಾಗಿ ವಿಂಗಡಿಸಿ, ನರೇಗಾದಿಂದ ಮೂಲ ಸೌಕರ್ಯ ಒದಗಿಸಿದ ನಂತರ ಗ್ರಾಮಸಭೆ ನಡೆಸಿ ಅರ್ಹರಿಗೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚಿಸಿದರು.

ADVERTISEMENT

ಬಸವ ವಸತಿ ಯೋಜನೆಯಲ್ಲಿ 2,000 ಮನೆಗಳಿಗೆ ಮಂಜೂರಾತಿ ನೀಡಿದ್ದು, ಅರ್ಹರಿಗೆ ನೀಡಲು ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಸೂಚನೆ ನೀಡಿ ಪೌತಿ ಖಾತೆ ಪೂರ್ಣಗೊಳಿಸಲು ಗುರಿ ನಿಗದಿಗೊಳಿಸಿ ಸೂಚನೆ ನೀಡಿದರು.

ಸಾಮಾಜಿಕ ಭಧ್ರತೆ ಯೋಜನೆ ಫಲಾನುಭವಿಗಳನ್ನು ಗುರುತಿಸಿ ವಿತರಣೆ ಮಾಡುವಲ್ಲಿ ವಿಫಲರಾದ ಗ್ರೇಡ್– 2 ತಹಶೀಲ್ದಾರ್ ಯೋಗೀಶ್ ಅವರಿಗೆ ಎಚ್ಚರಿಕೆ ನೀಡಿದರು.

ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾರ್ಕೋನಹಳ್ಳಿ ಜಲಾಶಯದ ಕೋಡಿ ರಸ್ತೆಯನ್ನು ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಮದ್ದೂರು ರಸ್ತೆಯ ರೈಲ್ವೆ ಸೇತುವೆ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದಾಗ ಸೇತುವೆಯನ್ನು ರೈಲ್ವೆ ಇಲಾಖೆ ನಿರ್ಮಿಸಿದ್ದು, ನಿರ್ವಹಣೆಯನ್ನು ಮಾಡಬೇಕಿರುವ ಕೆ–ಶಿಪ್ ನಿರ್ಲಕ್ಷ್ಯದಿಂದಾಗಿ ಸೇತುವೆ ಶಿಥಿಲವಾಗಿದೆ ಎಂದು ತಿಳಿಸಿದಾಗ ಟೋಲ್ ವಸೂಲಾತಿಗೆ ಅಡ್ಡಪಡಿಸಿ ಗಮನ ಸೆಳೆಯುವುದಾಗಿ ಎಚ್ಚರಿಸಿದರು.

ತಾಲ್ಲೂಕು ನೋಡಲ್ ಅಧಿಕಾರಿ ವಿಶ್ವನಾಥ್, ಸರ್ಕಾರಿ ಇಲಾಖಾ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಿದಾಗ ಸಮಸ್ಯೆಗಳನ್ನು ಬಗೆಹರಿಸಬಹುದು. ಪ್ರಗತಿಯನ್ನು ಸಾಧಿಸಬಹುದಾಗಿದ್ದು, ಅಧಿಕಾರಿಗಳು ಅಂಕಿ ಅಂಶಗಳನ್ನು ನೀಡುವ ಜತೆಗೆ ವಾಸ್ತವ ಚಿತ್ರಣ ನೀಡಬೇಕಿದೆ ಎಂದರು.

ತಹಶೀಲ್ದಾರ್ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಜರಿದ್ದರು.

ತಹಶೀಲ್ದಾರ್–ಪಿಡಿಒ ವಾಗ್ವಾದ

ತಾಲ್ಲೂಕಿನಲ್ಲಿ ಬರ ನಿರ್ವಹಣೆ ಸಮಯದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ ಬಾಬ್ತನ್ನು ನೀಡಲು ಕಗ್ಗರೆ ಗ್ರಾಮ ಪಂಚಾಯಿತಿ ಪಿಡಿಒ ಭಾಗ್ಯಲಕ್ಷ್ಮೀ ಸೇರಿದಂತೆ ಕೆಲವರು ಶಾಸಕರಿಗೆ ಮನವಿ ಮಾಡಿದರು. ತಹಶಿಲ್ದಾರ್ ವಿಶ್ವನಾಥ್ ಟ್ಯಾಂಕರ್ ನೀರು ಸರಬರಾಜಿಗೆ ಹಣ ನೀಡುವುದಿಲ್ಲ ಎಂದಾಗ ಅಸಮಾಧಾನಗೊಂಡ ಪಿಡಿಒ ಭಾಗ್ಯಲಕ್ಷ್ಮೀ ‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಅನುಮತಿ ನೀಡಿ ಹಣ ನೀಡುವುದಿಲ್ಲ ಎಂದರೆ ಹೇಗೆ ನಮ್ಮ ಕೈಯಿಂದ ಕೊಡಬೇಕಾ’ ಎಂದು ಪ್ರಶ್ನಿಸಿದರು. ಉಳಿದ ಪಿಡಿಒಗಳು ಬೆಂಬಲಕ್ಕೆ ಬಂದಾಗ ಶಾಸಕರು ಮಧ್ಯಪ್ರವೇಶಿಸಿ ಸಮಾಧಾನಗೊಳಿಸಿದರು.

ಅಧಿಕಾರಿಗಳಿಗೆ ಆರೋಗ್ಯ ಪಾಠ

ಸಭೆಯಲ್ಲಿ ಕೆಲ ಸ್ಥೂಲಕಾಯದ ಅಧಿಕಾರಿಗಳನ್ನು ಕಂಡ ಶಾಸಕರು ಆರೋಗ್ಯದ ಹಿತದೃಷ್ಟಿಯಿಂದ ವಾರಕ್ಕೊಮ್ಮೆ 14 ಗಂಟೆ ಉಪವಾಸ ಮಾಡುವುದರಿಂದ ಉಂಟಾಗುವ ಲಾಭವನ್ನು ವಿವರಿಸಿದರು. ವಯಸ್ಸು ಆಗುತ್ತಿದ್ದಂತೆ ಸಕ್ಕರೆ ಕಾಯಿಲೆ ರಕ್ತದೊತ್ತಡ ಕಾಣಿಸಿಕೊಳ್ಳುವುದರಿಂದ ಸಮ ಪ್ರಮಾಣದ ಪೌಷ್ಠಿಕ ಆಹಾರ ಹಸಿರು ತರಕಾರಿ ಸೇವನೆಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.