ADVERTISEMENT

ತುಮಕೂರು: ಬ್ಯಾಂಕ್‌ ನೌಕರನಿಗೆ ₹18.73 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2024, 4:50 IST
Last Updated 7 ಸೆಪ್ಟೆಂಬರ್ 2024, 4:50 IST
ಸೈಬರ್ ಅಪರಾಧ 
ಸೈಬರ್ ಅಪರಾಧ    

ತುಮಕೂರು: ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ಶಿರಾ ಪಟ್ಟಣದ ಬ್ಯಾಂಕ್‌ ನೌಕರ ಬಿ.ಎನ್‌.ಹರೀಶ್‌ ₹18.73 ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತರು ಕರೆ ಮಾಡಿ ಆನ್‌ಲೈನ್‌ನಲ್ಲಿ ಷೇರು ಖರೀದಿ ಮತ್ತು ಮಾರಾಟದ ಬಗ್ಗೆ ತಿಳಿಸಿದ್ದಾರೆ. ಹಣ ಹೂಡಿಕೆ ಮಾಡಿ ಶೇ 20ರಷ್ಟು ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ‘ಬ್ಲಾಕ್‌ಸ್ಟೋನ್‌ ಇನ್‌ಸ್ಟಿಟ್ಯೂಟ್‌ ವಿಐಪಿ ಗ್ರೂಪ್‌–602’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಅವರನ್ನು ಸೇರಿಸಿದ್ದಾರೆ. ‘ವೆಲ್ತ್‌ ರಿವಿವಲ್‌ ಪ್ಲಾನ್‌’ ಎಂಬ ಷೇರು ಮಾರುಕಟ್ಟೆ ಪ್ಲಾನ್‌ ಶುರು ಮಾಡುತ್ತಿದ್ದು, ಆಸಕ್ತರು ಬಂಡವಾಳ ಹೂಡಿಕೆ ಮಾಡಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹರೀಶ್‌ ‘ಡಬ್ಲ್ಯೂಬಿಎಸ್‌ಎಸ್‌ ಪ್ರೊ’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ದಾಖಲೆ ಸಲ್ಲಿಸಿ, ಖಾತೆ ತೆರೆದಿದ್ದರು. ವಾಟ್ಸ್‌ ಆ್ಯಪ್‌ನಲ್ಲಿ ಸೈಬರ್‌ ಆರೋಪಿಗಳು ತಿಳಿಸಿದ ಖಾತೆಗೆ ಮೊದಲು ₹30 ಸಾವಿರ ವರ್ಗಾಯಿಸಿದ್ದರು. ಒಂದೇ ದಿನಕ್ಕೆ ₹5 ಸಾವಿರ ಲಾಭ ಗಳಿಸಿರುವುದಾಗಿ ಅವರ ಟ್ರೇಡಿಂಗ್‌ ಖಾತೆಯಲ್ಲಿ ತೋರಿಸಿದೆ. ಇದನ್ನು ನಂಬಿ ಹಂತ ಹಂತವಾಗಿ ಒಟ್ಟು ₹18,73,310 ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ADVERTISEMENT

ಅವರ ಖಾತೆಯಲ್ಲಿ ₹26.25ಲಕ್ಷ ಹಣ ಇರುವುದಾಗಿ ತೋರಿಸಿದ್ದು, ವಿತ್‌ಡ್ರಾ ಮಾಡಲು ಹೋದರೆ ‘ತೆರಿಗೆ ಕಟ್ಟಬೇಕಾಗುತ್ತದೆ’ ಎಂದು ವಂಚಕರು ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.