ADVERTISEMENT

ತುಮಕೂರು: ಪರಿಶಿಷ್ಟ ಮಹಿಳೆ ಕೊಲೆ; 21 ಮಂದಿಗೆ ಜೀವಾವಧಿ ಶಿಕ್ಷೆ

ದಲಿತ ಸಮುದಾಯದ ಡಾಬಾ ಹೊನ್ನಮ್ಮ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 19:24 IST
Last Updated 21 ನವೆಂಬರ್ 2024, 19:24 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಪರಿಶಿಷ್ಟ ಜಾತಿಯ ಮಹಿಳೆ ಡಾಬಾ ಹೊನ್ನಮ್ಮ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಎಂದು ಸಾಬೀತಾದ ಎಲ್ಲಾ 21 ಮಂದಿಗೂ ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿಕ್ಷೆ ಪ್ರಕಟವಾಗುತ್ತಿದ್ದಂತೆ 21 ಅಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದರು.ಜೀವಾವಧಿ (ಜೀವ ಇರುವವರೆಗೂ) ಶಿಕ್ಷೆ ಜತೆಗೆ ತಲಾ ₹13,500 ದಂಡ ವಿಧಿಸಲಾಗಿದೆ.

ಬುಧವಾರ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ ಎಲ್ಲಾ 21 ಮಂದಿಯನ್ನೂ ಅಪರಾಧಿಗಳು ಎಂದು ಆದೇಶಿಸಿತ್ತು. ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶ ಎ.ನಾಗಿರೆಡ್ಡಿ ಗುರುವಾರ ಪ್ರಕಟಿಸಿದರು.

ADVERTISEMENT

ಒಟ್ಟು 27 ಮಂದಿಯನ್ನು ಅಪರಾಧಿಗಳು ಎಂದು ಕೋರ್ಟ್ ತೀರ್ಮಾನಿಸಿತ್ತು. ಅದರಲ್ಲಿ 6 ಮಂದಿ ಈಗಾಗಲೇ ಮೃತಪಟ್ಟಿದ್ದು, ಉಳಿದ 21 ಮಂದಿಗೆ ಶಿಕ್ಷೆ ಜಾರಿ ಮಾಡಲಾಗಿದೆ. ಐಪಿಸಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷೆ ವಿಧಿಸಲಾಗಿದೆ.

ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2010 ಜೂನ್ 28ರಂದು ಪರಿಶಿಷ್ಟ ಜಾತಿಗೆ ಸೇರಿದ ಹೊನ್ನಮ್ಮ ಕೊಲೆ ನಡೆದಿತ್ತು. ಸುದೀರ್ಘ ಒಂದೂವರೆ ದಶಕ ವಿಚಾರಣೆ ನಡೆದು ಇದೀಗ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

ಡಾಬಾ ನಡೆಸುತ್ತಿದ್ದು ಗೋಪಾಲಪುರದ ಹೊನ್ನಮ್ಮ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಗ್ರಾಮದ ಜನರು ಹಾಗೂ ಹೊನ್ನಮ್ಮನ ಮಧ್ಯೆ ದ್ವೇಷ ಉಂಟಾಗಿತ್ತು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಕೊಲೆಯಾದ ಮಹಿಳೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎಸ್.ಜ್ಯೋತಿ ವಾದ ಮಂಡಿಸಿದ್ದರು.

ಶಿಕ್ಷೆಗೆ ಒಳಗಾದವರು: ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ (ಪರಿಶಿಷ್ಟ ಜಾತಿ), ಸತ್ಯಪ್ಪ– ಸತೀಶ (ಪರಿಶಿಷ್ಟ ಜಾತಿ), ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್).

ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಈಗಾಗಲೇ ಮೃತಪಟ್ಟಿದ್ದಾರೆ.

ಸಾಕ್ಷಿದಾರರ ವಿಚಾರಣೆ ಹೇಳಿಕೆಯನ್ನು ಪರಿಗಣಿಸಿ ಅಪರಾಧಿಗಳಿಗೆ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ
ಬಿ.ಎಸ್.ಜ್ಯೋತಿ ವಿಶೇಷ ಸರ್ಕಾರಿ ಅಭಿಯೋಜಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.