ADVERTISEMENT

25 ತೆರೆದ ಕೊಳವೆ ಬಾವಿ

ತೋವಿನಕೆರೆ ಸೇರಿದಂತೆ 15 ಗ್ರಾಮಸ್ಥರು ಆತಂಕದಲ್ಲಿ

ಎಚ್.ಜೆ.ಪದ್ಮರಾಜು
Published 26 ಜೂನ್ 2014, 9:16 IST
Last Updated 26 ಜೂನ್ 2014, 9:16 IST

ತೋವಿನಕೆರೆ: ಈಚೆಗೆ ವಿಜಾಪುರ ಜಿಲ್ಲೆ ನಾಗಠಾಣದಲ್ಲಿ ಮಗುವೊಂದು ಕೊಳವೆಬಾವಿಗೆ ಬಿದ್ದು ಮೃತಪಟ್ಟ ನಂತರ ರಾಜ್ಯದಾದ್ಯಂತ ತೆರೆದ ಕೊಳವೆಬಾವಿಗಳನ್ನು ಮುಚ್ಚಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸವು ಆಗುತ್ತಿಲ್ಲ ಎಂಬುದಕ್ಕೆ ತೋವಿನಕೆರೆ ಸಮೀಪದ ೧೫ ಗ್ರಾಮಗಳಲ್ಲಿನ ೨೫ಕ್ಕೂ ಹೆಚ್ಚು ತೆರೆದ ಕೊಳವೆ ಬಾವಿಗಳು ನಿದರ್ಶನದಂತಿವೆ.

ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರೇನಹಳ್ಳಿ, ದೇವರಹಳ್ಳಿ, ಸಿ.ವಿ.ಡಿ.ಪಾಳ್ಯ. ಸಿ.ಎಸ್.ಜಿ.ಪಾಳ್ಯ, ಡಿ.ಎಸ್.ಜಿ.ಪಾಳ್ಯ, ಕಬ್ಬಿಗೆರೆ, ಚಿಕ್ಕರಸನಹಳ್ಳಿ, ಅಜ್ಜೇನಹಳ್ಳಿ, ಚಿಕ್ಕನಹಳ್ಳಿಗಳಲ್ಲಿ ವಿಫಲ ಕೊಳವೆಬಾವಿ ಕೊರೆದು ಹೋದವರು ಅವನ್ನು ಮುಚ್ಚಲು ಮತ್ತೆ ಇತ್ತ ಬಂದಿಲ್ಲ.

ಅನೇಕ ವಿಫಲ ಕೊಳವೆಬಾವಿಗಳು ಮುಚ್ಚಳವಿಲ್ಲದೆ ತುಕ್ಕು ಹಿಡಿದಿರುವ ಪೈಪ್ ಅಥವಾ ಅರ್ಧ ತುಂಡಾದ ಪೈಪ್‌ನೊಂದಿಗೆ ಮಕ್ಕಳ ಬಲಿ ಬೇಡುತ್ತಿವೆ. ಕೆಲ ಮನೆ ಹೊಸ್ತಿಲ ಬಳಿಯೇ ಕೊಳವೆ ಬಾವಿಗಳು ಇವೆ. ಅಂಬೆಗಾಲಿಡುವ ಮಕ್ಕಳಿಗೆ ಇಂಥ ಕೊಳವೆಬಾವಿಗಳಿಂದ ಅಪಾಯ ಎನ್ನುವ ಸ್ಥಳೀಯರು ಇವುಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ.

‘ಜಮೀನಿನಲ್ಲಿ ರೈತರೊಬ್ಬರು ಕೊಳವೆ ಬಾವಿ ಕೊರೆಸುವಾಗ ಬಿಗಿಯಾದ ಕಾನೂನು  ಇದೆ. ಆದರೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವತಿಯಿಂದ ಕೊರೆಯುವಾಗ ಏಕೆ ಇಂಥ ಕಾನೂನುಗಳು ಕಟ್ಟುನಿಟ್ಟಾಗಿ ಅನ್ವಯವಾಗುವುದಿಲ್ಲ’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

‘ಕೆಲ ಕದೀಮರು ಕಬ್ಬಿಣದ ಆಸೆಗಾಗಿ ನೆಲದಿಂದ ಮೇಲೆದ್ದಿರುವ ಪೈಪ್ ಮುರಿದುಕೊಂಡು ಹೋಗಿದ್ದಾರೆ. ಇದರೊಳಗೆ ಕಾಲಿಟ್ಟು ಜಾನುವಾರು ಗಾಯ ಮಾಡಿಕೊಂಡಿವೆ’ ಎಂದು ಗೋಪಾಲಕರು ನೋವಿನಿಂದ ಹೇಳುತ್ತಾರೆ.

ಮುಚ್ಚುವುದು ಹೀಗೆ
ವಿಫಲ ಕೊಳವೆಬಾವಿ ಮುಚ್ಚಲು ಅನುಸರಿಸಬೇಕಾದ ಕ್ರಮ ಇದು. ಎಂದರೆ ಒಣಗಿದ ಮಣ್ಣಿನ (ಮರಳು) ಪುಡಿಯನ್ನು ಸ್ವಲ್ಪಸ್ವಲ್ಪವಾಗಿ ಕೊಳವೆಬಾವಿಗೆ ಹಾಕಬೇಕು. ಕೆಲವು ಅಡಿಗಳಷ್ಟು ಹಾಕಿದ ನಂತರ ನೀರು ಬಿಟ್ಟು ಮತ್ತೆ ಮಣ್ಣು ಹಾಕಿ ಮುಚ್ಚಬೇಕು. ಕೇವಲ ಮುಣ್ಣು ಸುರಿದರೆ ಅದು ಮಳೆಗಾಲದಲ್ಲಿ ಒಣಗಿ ಹೊಂಡ ಬೀಳುತ್ತದೆ ಎಂದು ಹಿರಿಯ ಕೃಷಿಕರು ಹೇಳುತ್ತಾರೆ.

ಕೊಳವೆ ಬಾವಿ ಕೊರೆಯುವ ಮುನ್ನ, ಕೊರೆದ ನಂತರ ಸಂಭವಿಸುವ ಅನಾ­ಹುತಗಳಿಗೆ  ಭೂ ಮಾಲೀಕರು ಮತ್ತು ಕೊಳವೆಬಾವಿ ಕೊರೆಯುವ ಏಜೆನ್ಸಿ ಹೊಣೆ ಹೊರಬೇಕು. ತೆರೆದ ಕೊಳವೆ ಬಾವಿ ಕುರಿತಾದ ಮಾಹಿತಿಯನ್ನು 0816– -2278059 ತಿಳಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.