ತುಮಕೂರು: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕ್ (ಡಿಸಿಸಿ) ₹2.50 ಕೋಟಿ ಲಾಭ ಗಳಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಪ್ರಕಟಿಸಿದರು.
ಸೆ. 15ರಂದು ನಗರದಲ್ಲಿ ಡಿಸಿಸಿ ಬ್ಯಾಂಕ್ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದ್ದು, ಅಲ್ಲಿ ಎಲ್ಲಾ ವಿವರಗಳನ್ನು ಸದಸ್ಯರ ಮುಂದಿಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್ ಕಳೆದ ಆಗಸ್ಟ್ ಅಂತ್ಯದ ವರೆಗೆ ₹1,623.82 ಕೋಟಿ ಠೇವಣಿ ಹೊಂದಿದ್ದು, ಅಪೆಕ್ಸ್ ಬ್ಯಾಂಕ್, ನಬಾರ್ಡ್‌ನಿಂದ ₹740 ಕೋಟಿ ಸಾಲ ಪಡೆದುಕೊಳ್ಳಲಾಗಿದೆ. ಪಡೆದ ಸಾಲಕ್ಕೆ ಸಕಾಲದಲ್ಲಿ ಬಡ್ಡಿ, ಸಾಲದ ಕಂತು ಮರುಪಾವತಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಈ ವರ್ಷ ಶೂನ್ಯ ಬಡ್ಡಿ ಬರದಲ್ಲಿ ₹799 ಕೋಟಿ ಕೃಷಿ ಸಾಲ ನೀಡಲಾಗಿದೆ. ₹1,000 ಕೋಟಿ ಕೃಷಿಯೇತರ ಸಾಲ ಕೊಡಲಾಗಿದೆ. ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ದಂಧೆ ತಪ್ಪಿಸುವ ಸಲುವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ₹10 ಸಾವಿರದ ವರೆಗೂ ಸಾಲ ಕೋಡಲಾಗುತ್ತಿದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಗಳು ಹೆಚ್ಚು ಲಾಭ ತೋರಿಸಿದಷ್ಟು ಆದಾಯ ತೆರಿಗೆ ಪಾವತಿಸುವುದು ಅಧಿಕವಾಗುತ್ತದೆ. ಹಾಗಾಗಿ ಡಿಸಿಸಿ ಬ್ಯಾಂಕ್‌ಗೆ ಬರುವ ಆದಾಯವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ. ಇದರಿಂದ ಡಿಸಿಸಿ ಬ್ಯಾಂಕ್ ಹೆಚ್ಚು ಲಾಭ ಗಳಿಸಿಲ್ಲ. ತೆರಿಗೆ ಉಳಿಸಿ, ಇತರೆ ಕೆಲಸಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಮತ್ತೆ ಜಾರಿಗೆ ಬಂದರೆ ರೈತರಿಗೆ ಸಹಕಾರಿಯಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.