ADVERTISEMENT

26ರಂದು ಕಾರ್ಮಿಕರ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:33 IST
Last Updated 23 ಅಕ್ಟೋಬರ್ 2024, 4:33 IST
ತುಮಕೂರಿನಲ್ಲಿ ಮಂಗಳವಾರ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ, ಮಂಜುಳಾ ಗೋನಾವರ, ಎಂ.ವಿ.ಕಲ್ಯಾಣಿ, ರೇಖಾ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಮಂಗಳವಾರ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ, ಮಂಜುಳಾ ಗೋನಾವರ, ಎಂ.ವಿ.ಕಲ್ಯಾಣಿ, ರೇಖಾ ಉಪಸ್ಥಿತರಿದ್ದರು    

ತುಮಕೂರು: ಆಲ್‌ ಇಂಡಿಯಾ ಯು‌ನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ವತಿಯಿಂದ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಅ.26 ಮತ್ತು 27ರಂದು ಮೈಸೂರಿನಲ್ಲಿ ನಡೆಯಲಿದೆ.

‘ಸ್ವಾತಂತ್ರ್ಯದ ನಂತರ ಇಲ್ಲಿಯ ತನಕ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಬಂಡವಾಳಗಾರರ ಹಿತ ರಕ್ಷಿಸಿವೆ. ಅವರ ಪರವಾದ ಆರ್ಥಿಕ, ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ಬಂಡವಾಳಶಾಹಿ ವರ್ಗದ ಕ್ರೂರ ಶೋಷಣೆ ವಿರುದ್ಧ ಕಾರ್ಮಿಕ ಹೋರಾಟ ಬಲಪಡಿಸಲು, ಚಳವಳಿ ಬೆಳೆಸಲು ಸಮ್ಮೇಳನ ಸಂಘಟಿಸಲಾಗಿದೆ’ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮಿ ಇಲ್ಲಿ ಮಂಗಳವಾರ ಹೇಳಿದರು.

ಜಾಗತೀಕರಣ, ಉದಾರೀಕರಣ ನೀತಿಯ ಮೂಲಕ ಸಾರ್ವಜನಿಕ ಉದ್ದಿಮೆ, ದೇಶದ ನೈಸರ್ಗಿಕ ಸಂಪತ್ತನ್ನು ಕೆಲವೇ ಕಾರ್ಪೊರೇಟ್ ಮನೆತನಗಳಿಗೆ ಧಾರೆ ಎರೆಯಲಾಗಿದೆ. ಶೇ 5ರಷ್ಟು ಜನ ಶೇ 60ರಷ್ಟು ಸಂಪತ್ತು ಅನುಭವಿಸುತ್ತಿದ್ದಾರೆ. ಕಾರ್ಮಿಕರ ಕನಿಷ್ಠ ವೇತನ, ಸರ್ಕಾರಗಳ ಧೋರಣೆ, ದುಡಿಮೆ ಅವಧಿ ವಿಸ್ತರಣೆ ಸೇರಿ ಹಲವಾರು ವಿಚಾರಗಳು ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರು, ಹೊರಗುತ್ತಿಗೆ ನೌಕರರು, ಗಣಿ ಕಾರ್ಮಿಕರು, ವಿದ್ಯುತ್ ನೌಕರರು, ಆಶಾ, ಅಂಗನವಾಡಿ, ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ. 26ರಂದು ಮಧ್ಯಾಹ್ನ 12 ಗಂಟೆಗೆ  ಸಮ್ಮೇಳನದ ಬಹಿರಂಗ ಅಧಿವೇಶನ ನಡೆಯಲಿದೆ.‌ ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕೆ.ರಾಧಾಕೃಷ್ಣ ಉದ್ಘಾಟಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶಂಕರ್‌ದಾಸ್ ಗುಪ್ತ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾ ಸಂಚಾಲಕಿ ಮಂಜುಳಾ ಗೋನಾವರ, ಎಂ.ವಿ.ಕಲ್ಯಾಣಿ, ರೇಖಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.