ADVERTISEMENT

ತುಮಕೂರು | ಪೊಲೀಸರ ವೇಷದಲ್ಲಿ ₹65 ಲಕ್ಷ ವಂಚನೆ

ಹೊಸ ಹಾದಿ ಹಿಡಿದ ಸೈಬರ್‌ ವಂಚಕರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:19 IST
Last Updated 27 ಅಕ್ಟೋಬರ್ 2024, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಸೈಬರ್‌ ಆರೋಪಿಗಳು ವಂಚನೆಗೆ ಹೊಸ ಹಾದಿ ಹುಡುಕಿದ್ದು, ಪೊಲೀಸ್‌ ವೇಷ ತೊಟ್ಟು ವಿಡಿಯೊ ಕರೆ ಮಾಡಿ, ಅಮಾಯಕರನ್ನು ಹೆದರಿಸಿ ಹಣ ಪೀಕುತ್ತಿದ್ದಾರೆ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ನಿವೃತ್ತ ಉಪನ್ಯಾಸಕರೊಬ್ಬರು ಸೈಬರ್‌ ಬಲೆಗೆ ಬಿದ್ದು ಬರೋಬ್ಬರಿ ₹65 ಲಕ್ಷ ಕಳೆದುಕೊಂಡಿದ್ದಾರೆ.

ಅ.16ರಂದು ಎಂ.ಪಿ.ಶಂಕರಪ್ಪ ಎಂಬುವರಿಗೆ ವಾಟ್ಸ್‌ ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡಿದ ವಂಚಕರು ಮಹಾರಾಷ್ಟ್ರದ ಪೊಲೀಸರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಮಾನವ ಕಳ್ಳಸಾಗಾಣೆ ಪ್ರಕರಣ ಪತ್ತೆ ಹಚ್ಚಿದ್ದು, ಸದರಿ ಪ್ರಕರಣದ ಆರೋಪಿ ನಿಮ್ಮ ಹೆಸರು ಹೇಳಿದ್ದಾರೆ. ಆದ್ದರಿಂದ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.

ಬಂಧನಕ್ಕೂ ಮುನ್ನ ನಿಮ್ಮ ಮನೆ, ಬ್ಯಾಂಕ್‌ ಖಾತೆಯ ದಾಖಲಾತಿ ತೋರಿಸಿ ಎಂದು ತಿಳಿಸಿದ್ದಾರೆ. ಅದರಂತೆ ಎಲ್ಲ ದಾಖಲೆ ವಿಡಿಯೊ ಕರೆಯಲ್ಲಿ ತೋರಿಸಿದ್ದಾರೆ. ನಂತರ ‘ನಿಮ್ಮ ಖಾತೆಯಲ್ಲಿನ ಹಣವನ್ನು ಸರ್ಕಾರದ ಖಾತೆಗೆ ಜಮಾ ಮಾಡಬೇಕು. ಕೆಲವು ದಿನಗಳ ನಂತರ ನಿಮ್ಮ ಖಾತೆಗೆ ವಾಪಸ್‌ ವರ್ಗಾಯಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಅ.24ರ ವರೆಗೆ ನಿರಂತರವಾಗಿ ವಿಡಿಯೊ ಕರೆ ಮಾಡಿ ತೊಂದರೆ ಕೊಟ್ಟಿದ್ದಾರೆ.

ADVERTISEMENT

ಅ.25ರಂದು ಮತ್ತೊಮ್ಮೆ ಕರೆ ಮಾಡಿ ₹65 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ನಿಮ್ಮನ್ನು ಬಂಧಿಸಲಾಗುವುದು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರ ನಂತರ ಶಂಕರಪ್ಪ ತಮ್ಮ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ₹65,00,057 ಹಣ ಸೈಬರ್‌ ಕಳ್ಳರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಮತ್ತೆ ₹50 ಲಕ್ಷ ನೀಡುವಂತೆ ಒತ್ತಡ ಹಾಕಿದ್ದಾರೆ. ಶಂಕರಪ್ಪ ತಮ್ಮ ಸಂಬಂಧಿಕರ ಬಳಿ ವಿಚಾರಿಸಿದಾಗ ಇದು ಮೋಸದ ಜಾಲ ಎಂಬುವುದು ಗೊತ್ತಾಗಿದೆ. ವಂಚನೆ ಕುರಿತು ಸೈಬರ್‌ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.