ADVERTISEMENT

ಸೇತುವೆ ನಿರ್ಮಾಣಕ್ಕೆ ₹6.50 ಕೋಟಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 14:37 IST
Last Updated 20 ಡಿಸೆಂಬರ್ 2023, 14:37 IST
ತುಮಕೂರು ನಗರದ ಶಿರಾ ಗೇಟ್ ರಸ್ತೆಯಲ್ಲಿ ಶಿಥಿಲಗೊಂಡಿರುವ ಸೇತುವೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬುಧವಾರ ಪರಿಶೀಲಿಸಿದರು. ಟೂಡಾ ಆಯುಕ್ತ ಶಿವಕುಮಾರ್, ಎಂಜಿನಿಯರುಗಳಾದ ಆಶಾ, ರವಿ, ಶೈಲಜಾ ಜತೆಯಲ್ಲಿದ್ದರು
ತುಮಕೂರು ನಗರದ ಶಿರಾ ಗೇಟ್ ರಸ್ತೆಯಲ್ಲಿ ಶಿಥಿಲಗೊಂಡಿರುವ ಸೇತುವೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬುಧವಾರ ಪರಿಶೀಲಿಸಿದರು. ಟೂಡಾ ಆಯುಕ್ತ ಶಿವಕುಮಾರ್, ಎಂಜಿನಿಯರುಗಳಾದ ಆಶಾ, ರವಿ, ಶೈಲಜಾ ಜತೆಯಲ್ಲಿದ್ದರು   

ತುಮಕೂರು: ನಗರದ ಶಿರಾ ಗೇಟ್ ರಸ್ತೆಯ ಎಸ್– ಮಾಲ್ ಬಳಿ ಶಿಥಿಲಗೊಂಡಿರುವ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ₹6.50 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಶಿಥಿಲಗೊಂಡಿರುವ ಸೇತುವೆ ಬಳಿ ಈಚೆಗೆ ಸಂಭವಿಸಿದ ಅಪಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಸ್ಥಳಕ್ಕೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿನೀಡಿ ಪರಿಶೀಲಿಸಿದರು.

ಸೇತುವೆ, ರಸ್ತೆ ವಿಸ್ತರಣೆಗೆ ಸರ್ಕಾರದ ಹಂತದಲ್ಲಿ ಒಪ್ಪಿಗೆ ಸಿಕ್ಕಿದ್ದು, ಅನುದಾನ ಸಹ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ADVERTISEMENT

ಶಿರಾ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ 4 ಕಿ.ಮೀ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಶಿಥಿಲಗೊಂಡಿರುವ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿಲ್ಲ. ಅಮಾನಿಕೆರೆ ನೀರು ಹರಿದು ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಈ ಜಾಗ ಕಿರಿದಾಗಿದ್ದು, ಪ್ರತಿನಿತ್ಯವೂ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದೆ. ಒಂದು ವೇಳೆ ಈ ಸೇತುವೆ ಕುಸಿದು ಬಿದ್ದರೆ ಶಿರಾ ಭಾಗಕ್ಕೆ ಸಂಪರ್ಕ ಕಡಿತಗೊಳ್ಳಲಿದೆ. ಹಾಗಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಟೂಡಾ ಆಯುಕ್ತ ಶಿವಕುಮಾರ್, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆಶಾ, ವಿನಯ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರವಿ, ಸಿದ್ದಪ್ಪ, ಟೂಡಾ ಎಂಜಿನಿಯರ್ ಶೈಲಜಾ, ಅರುಣ್, ಟೂಡಾ ಮಾಜಿ ಸದಸ್ಯ ಸತ್ಯಮಂಗಲ ಜಗದೀಶ್, ಪಾಲಿಕೆ ಸದಸ್ಯ ಇಂದ್ರಕುಮಾರ್, ಎಲ್‌ಐಸಿ ಲಿಂಗಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.