ತುಮಕೂರು: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಬಳಸುತ್ತಿರುವ ಗ್ಯಾಸ್ ಸಿಲಿಂಡರ್‌ನ 7 ತಿಂಗಳ ಬಿಲ್ ಬಾಕಿ ಉಳಿದಿದ್ದು, ಕಾರ್ಯಕರ್ತೆಯರು ತಮ್ಮ ಸ್ವಂತ ಹಣದಲ್ಲಿ ಅಡುಗೆ ಅನಿಲ ಖರೀದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 4,199 ಅಂಗನವಾಡಿ ಕೇಂದ್ರಗಳಿದ್ದು, ಬಹುತೇಕ ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗುತ್ತಿದೆ. ಕೆಲವು ಕಡೆ ಜನವರಿಯಲ್ಲಿ ಕೊನೆಯದಾಗಿ ಹಣ ಬಿಡುಗಡೆಯಾದರೆ, ಇನ್ನೂ ಕೆಲವು ಕೇಂದ್ರಗಳಿಗೆ ಮಾರ್ಚ್‌ನಲ್ಲಿ ಹಣ ಬಂದಿದ್ದೇ ಕೊನೆ. ಅಲ್ಲಿಂದ ಇದುವರೆಗೆ ಗ್ಯಾಸ್ ಸಿಲಿಂಡರ್ ಹಣ ಪಾವತಿಯಾಗಿಲ್ಲ.
ಒಂದು ಅಂಗನವಾಡಿ ಕೇಂದ್ರಕ್ಕೆ ಸರ್ಕಾರ ವರ್ಷಕ್ಕೆ 8 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುತ್ತಿದೆ. ಬಾಲ ವಿಕಾಸ ಸಮಿತಿ ಮುಖಾಂತರ ಏಜೆನ್ಸಿಗಳಿಂದ ಕೇಂದ್ರಗಳಿಗೆ ಸಿಲಿಂಡರ್ ಪೂರೈಸಲಾಗುತ್ತದೆ. ಏಜೆನ್ಸಿಗಳಿಗೆ ಸಕಾಲಕ್ಕೆ ಬಿಲ್ ಪಾವತಿಯಾಗದ ಕಾರಣ ಕಾರ್ಯಕರ್ತೆಯರಿಂದ ಹಣ ಪಡೆಯಲಾಗುತ್ತಿದೆ. ಕಾರ್ಯಕರ್ತೆಯರು ತಮಗೆ ಸಿಗುವ ಅತ್ಯಲ್ಪ ಸಂಬಳವನ್ನು ಸಿಲಿಂಡರ್‌ಗೆ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ತಿಂಗಳಿನಿಂದ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಪಾವತಿಯಾಗಿರಲಿಲ್ಲ. ಈ ತಿಂಗಳ ಪ್ರಾರಂಭದಲ್ಲಿ ವೇತನ ಸಿಕ್ಕಿದೆ. ಬ್ಯಾಂಕ್ ಖಾತೆಗೆ ಹಣ ಸಂದಾಯವಾದ ನಂತರ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಕಾರ್ಯಕರ್ತೆಯರಿಗೆ ಗ್ಯಾಸ್ ಸಿಲಿಂಡರ್ ಬಿಲ್ ಹೊರೆಯಾಗಿ ಪರಿಣಮಿಸಿದೆ.
ನೇಮಕಾತಿಯೂ ವಿಳಂಬ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆಯೂ ವಿಳಂಬವಾಗಿದೆ. ಕೆಲವು ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಒಬ್ಬರೇ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾರ್ಯದ ಒತ್ತಡವೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಅಂಗನವಾಡಿ ನಡೆಸುವುದೇ ಕಷ್ಟಕರವಾಗಿದೆ.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೇಮಕಾತಿಗಾಗಿ ಕಳೆದ ವರ್ಷ ಎರಡು ಬಾರಿ ಅರ್ಜಿ ಕರೆಯಲಾಗಿದೆ. ನಂತರ ಯಾವುದೇ ಬೆಳವಣಿಗೆಯಾಗಿಲ್ಲ. ಇಲಾಖೆಯ ಅಧಿಕಾರಿಗಳು ಅರ್ಜಿ ಸ್ವೀಕರಿಸಲು ಮಾತ್ರ ಸೀಮಿತರಾಗಿದ್ದಾರೆ. ಸಹಾಯಕಿಯರ ಸೇವೆ ಲಭ್ಯವಾಗದೆ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳು ಅಧ್ವಾನದ ಸ್ಥಿತಿಗೆ ತಲುಪಿವೆ’ ಎಂದು ಕಾರ್ಯಕರ್ತೆಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಕಾರ್ಯಕರ್ತೆಯರು ಅನಾರೋಗ್ಯದಿಂದ ಬಳಲುತ್ತಿದ್ದರೂ ರಜೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಹಾಯಕಿಯರನ್ನು ನೇಮಿಸಿದರೆ ಅವರಿಗೆ ತುಂಬಾ ಅನುಕೂಲವಾಗುತ್ತದೆ. ಅಧಿಕಾರಿಗಳು ಇತ್ತ ಗಮನ ಹರಿಸುವುದಿಲ್ಲ. ಜಿಲ್ಲಾಧಿಕಾರಿಯೂ ಈ ವಿಷಯದಲ್ಲಿ ಮೌನವಹಿಸಿದ್ದಾರೆ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಆರೋಪಿಸಿದರು.
ಮೂರು ವರ್ಷದಿಂದ ನಡೆಯದ ನೇಮಕಾತಿ ಕಾರ್ಯದ ಒತ್ತಡದಲ್ಲಿ ಕಾರ್ಯಕರ್ತೆಯರು ಬಾಕಿ ಬಿಲ್ ಬಿಡುಗಡೆಗೆ ಮನವಿ
ಬಿಲ್ ಬಿಡುಗಡೆಗೆ ಆಗ್ರಹ
ಗ್ಯಾಸ್ ಸಿಲಿಂಡರ್ ಬಾಕಿ ಬಿಲ್ ಬಿಡುಗಡೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನಿಯೋಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನ್‌ಕುಮಾರ್ ಅವರಿಗೆ ನಗರದಲ್ಲಿ ಬುಧವಾರ ಮನವಿ ಸಲ್ಲಿಸಿತು. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಟಿ.ಆರ್.ಕಲ್ಪನಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಖಜಾಂಚಿ ಅನಸೂಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.