ADVERTISEMENT

ಮೂಲೆ ಸೇರಿದ ಇ–ಶೌಚಾಲಯ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಮಾರ್ಟ್ ಶೌಚಾಲಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 5:59 IST
Last Updated 15 ಅಕ್ಟೋಬರ್ 2024, 5:59 IST
ತುಮಕೂರಿನ ಅಮಾನಿಕೆರೆ ಪಾರ್ಕ್‌ನಲ್ಲಿ ಹಾಳಾಗಿರುವ ಇ–ಶೌಚಾಲಯ
ತುಮಕೂರಿನ ಅಮಾನಿಕೆರೆ ಪಾರ್ಕ್‌ನಲ್ಲಿ ಹಾಳಾಗಿರುವ ಇ–ಶೌಚಾಲಯ   

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಗರದ ವಿವಿಧೆಡೆ ಅಳವಡಿಸಿದ್ದ ಇ–ಶೌಚಾಲಯಗಳು ಹಾಳಾಗಿದ್ದು, ಸಾಕಷ್ಟು ಕಡೆಗಳಲ್ಲಿ ನಿರ್ವಹಣೆ ಇಲ್ಲದೆ ಮೂಲೆ ಸೇರಿವೆ.

ಅಮಾನಿಕೆರೆಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಕೆಗೆ ಬಾರದೆ ಪೊದೆಯಲ್ಲಿ ತುಕ್ಕು ಹಿಡಿಯುತ್ತಿದೆ. ಇತರೆಡೆಗಳಲ್ಲಿ ನಿರ್ಮಿಸಿದ್ದ ಶೌಚಾಲಯಗಳು ಇದೇ ದಾರಿಯಲ್ಲಿ ಸಾಗಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಟವಾಡಿ, ಕ್ಯಾತ್ಸಂದ್ರ, ಮಹಾನಗರ ಪಾಲಿಕೆ ಆವರಣ, ಬಿಜಿಎಸ್‌ ವೃತ್ತದ ಸಿದ್ಧಗಂಗಾ ಕಾಲೇಜಿನ ಮುಂಭಾಗದಲ್ಲಿ ಇ–ಶೌಚಾಲಯ ಅಳವಡಿಸಲಾಗಿತ್ತು. ಆರಂಭದ ದಿನಗಳಲ್ಲಿ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಜನರೂ ಬಳಸುತ್ತಿದ್ದರು. ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರು ದೇಹ ಬಾಧೆ ತೀರಿಸಿಕೊಳ್ಳಲು ನೆರವಾಗಿತ್ತು.

ADVERTISEMENT

ಆರಂಭ ಶೂರತ್ವ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಪ್ರಾರಂಭದಲ್ಲಿ ನಿರ್ವಹಣೆ ಮಾಡಿದ ಮಹಾನಗರ ಪಾಲಿಕೆ ನಂತರ ಅತ್ತ ತಿರುಗಿಯೂ ನೋಡಲಿಲ್ಲ. ಸಮರ್ಪಕವಾಗಿ ನೀರು ಒದಗಿಸಲಿಲ್ಲ. ಸ್ವಚ್ಛತೆ ಕಾಪಾಡಲಿಲ್ಲ. ಪಾಲಿಕೆ ಆವರಣದಲ್ಲಿರುವ ಶೌಚಾಲಯ ನಿಂತಲ್ಲೇ ನಿಂತು ಬಳಸಲು ಆಗದಷ್ಟು ಹದಗೆಟ್ಟಿದೆ. ತನ್ನ ಕಚೇರಿ ಆವರಣದ ಶೌಚಾಲಯವನ್ನು ಸುಸ್ಥಿಯಲ್ಲಿ ಇಟ್ಟುಕೊಂಡಿಲ್ಲ ಎಂಬ ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಈಗ ಬಹುತೇಕ ಕಡೆಗಳಲ್ಲಿ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಸಾಕಷ್ಟು ಕಡೆಗಳಲ್ಲಿ ಬೀಗ ಹಾಕಲಾಗಿದೆ. ತೆರಿಗೆ ಹಣ ಯಾವ ರೀತಿ ಬಳಕೆಯಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

2017–18ನೇ ಸಾಲಿನಲ್ಲಿ ‘ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು’ ಎಂಬ ಅಡಿ ಬರಹ ಇರುವ 5 ಶೌಚಾಲಯಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಿ, ಜನರ ಬಳಕೆಗೆ ನೀಡಲಾಗಿತ್ತು. ಈ ಪೈಕಿ ಬಟವಾಡಿ ಹಾಗೂ ಕ್ಯಾತ್ಸಂದ್ರದ ಬಳಿ ಕೆಟ್ಟು ಹೋಗಿದ್ದ ಶೌಚಾಲಯಗಳನ್ನು ಅಮಾನಿಕೆರೆ ಪಾರ್ಕ್‌ಗೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ಶೌಚಾಲಯಗಳು ಪಾರ್ಕ್‌ನಲ್ಲಿ ಅನಾಥವಾಗಿ ಬಿದ್ದಿವೆ.

‘ಇರುವ ಶೌಚಾಲಯ ಸರಿಪಡಿಸುವುದರ ಬದಲಾಗಿ, ಮತ್ತೆ ಹೊಸದಾಗಿ ಶೌಚಾಲಯ ಕಟ್ಟುತ್ತಿದ್ದಾರೆ. ಅಧಿಕಾರಿಗಳು ಯೋಜನೆ, ಕಾಮಗಾರಿ ಪ್ರಾರಂಭದಲ್ಲಿ ಹೆಚ್ಚಿನ ಉತ್ಸಾಹ ತೋರುತ್ತಾರೆ. ನಂತರದ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ನಗರದ ಬಹುತೇಕ ಕಡೆ ಶೌಚಾಲಯದ ಸಮಸ್ಯೆ ಇದೆ. ಈಗ ಕೆಟ್ಟು ನಿಂತಿರುವ ಇ–ಶೌಚಾಲಯ ರಿಪೇರಿ ಮಾಡಿ ಜನರ ಬಳಕೆಗೆ ನೀಡಿದರೆ ತುಂಬಾ ಜನರಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಕೆಲಸ ಮಾಡಲಿ’ ಎಂದು ನಗರದ ಅಭಿಷೇಕ್‌ ಒತ್ತಾಯಿಸಿದರು.

ನಿಲ್ಲದ ಜನರ ಪರದಾಟ

ನಗರದ ಪ್ರಮುಖ ಸ್ಥಳಗಳು ವಾಣಿಜ್ಯ ಪ್ರದೇಶಗಳು ಜನಸಂದಣಿ ಇರುವ ಪ್ರದೇಶಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಈಗಲೂ ಜನರ ಪರದಾಟ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇ–ಶೌಚಾಲಯ ವ್ಯವಸ್ಥೆ ರೂಪಿಸಲಾಯಿತು. ಬಿಜಿಎಸ್ ವೃತ್ತ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಯಿತು. ಇದೇ ಮಾದರಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ನೆರವಾಗಲಿದೆ ಎಂಬ ಬೇಡಿಕೆ ವ್ಯಕ್ತವಾಗಿತ್ತು. ಮುಂದಿನ ದಿನಗಳಲ್ಲಿ ವಿಸ್ತರಿಸುವ ಭರವಸೆ ಸಹ ಜನಪ್ರತಿನಿಧಿಗಳಿಂದ ಸಿಕ್ಕಿತ್ತು. ಹೊಸದಾಗಿ ನಿರ್ಮಿಸುವುದು ಹೋಗಲಿ ಇರುವ ಶೌಚಾಲಯಗಳ ನಿರ್ವಹಣೆ ಮಾಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳು ಕಾರ್ಯ ನಿರ್ವಹಿಸುವಂತೆ ಮಾಡಿ ನಿರ್ವಹಣೆಗೆ ಗಮನ ಕೊಡಬೇಕು. ಜನಸಂದಣಿ ಅಗತ್ಯ ಇರುವೆಡೆ ಮಾತ್ರ ಹೊಸದಾಗಿ ಶೌಚಾಲಯ ನಿರ್ಮಿಸಬೇಕು. ಯೋಜನೆ ರೂಪಿಸುವ ಸಮಯದಲ್ಲೇ ನಿರ್ವಹಣೆ ಬಗ್ಗೆಯೂ ಗಮನ ಹರಿಸಬೇಕು ಎಂದು ನಗರದ ನಟರಾಜಪ್ಪ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.