ADVERTISEMENT

ಸಮಾಜದ ಮೌಢ್ಯ ತೊಲಗಿಸಲು ಕರೆ

ಅಗಳಕೋಟೆಯಲ್ಲಿ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 5:08 IST
Last Updated 29 ಡಿಸೆಂಬರ್ 2022, 5:08 IST
ತುಮಕೂರು ಹೊರವಲಯದ ಅಗಳಕೋಟೆಯಲ್ಲಿ ಬುಧವಾರ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು
ತುಮಕೂರು ಹೊರವಲಯದ ಅಗಳಕೋಟೆಯಲ್ಲಿ ಬುಧವಾರ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು   

ತುಮಕೂರು: ಮೂಢನಂಬಿಕೆ, ಕಂದಾಚಾರ ಪ್ರಶ್ನಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಹೀಗಾಗಿ ಸಂವಿಧಾನದ ಉಳಿವಿಗೆ ಎಲ್ಲರು ಮುಂದಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಕರೆ ನೀಡಿದರು.

ನಗರ ಹೊರವಲಯದ ಅಗಳಕೋಟೆಯಲ್ಲಿ ಬುಧವಾರ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿ
ನಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಕೇವಲ ಮಾತನಾಡುವುದು ಮಾತ್ರವಲ್ಲ. ಪ್ರಶ್ನೆ, ವಿಮರ್ಶೆ, ಟೀಕೆ ಮಾಡುವುದು, ಮೌನವಾಗಿರುವುದು ಎಂಬ ವ್ಯಾಖ್ಯಾನವನ್ನು ನ್ಯಾಯಾಲಯಗಳು ಮಾಡಿವೆ’ ಎಂದರು.

ಕ್ರೂರ, ಅನಾರೋಗ್ಯ, ಅಮಾನವೀಯ, ವಿದ್ವಂಸಕಾರಿ, ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾದ ಆಲೋಚನೆ ಗಳೇ ಮೂಢನಂಬಿಕೆಗಳು. ಇವು ಮುಂದುವರಿದರೆ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇದನ್ನು ತಡೆಯುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.

ADVERTISEMENT

ಅತಿ ಹೆಚ್ಚು ಮಹಿಳೆಯರು ಮೌಢ್ಯಾಚರಣೆಗೆ ಒಳಗಾಗಿದ್ದಾರೆ. ಮೌಢ್ಯ ತೊಲಗಿಸಿ, ಸಂವಿಧಾನದ ಮೂಲ ಆಶಯದಂತೆ ಬದುಕು ಸಾಗಿಸಬೇಕಿದೆ ಎಂದು ತಿಳಿಸಿದರು.

ವಿಜ್ಞಾನಿ ಎ.ಎಸ್.ಕಿರಣ್‌ಕುಮಾರ್, ‘ಆಧುನಿಕ ತಂತ್ರಜ್ಞಾನ ದಿನೇ ದಿನೇ ಬೆಳವಣಿಗೆಯಾಗುತ್ತಿದೆ. ಅಂಗೈಯಲ್ಲಿರುವ ಮೊಬೈಲ್‌ನಿಂದ ಹಲವಾರು ವಿಷಯಗಳು ತಿಳಿಯುತ್ತವೆ. ವಿಜ್ಞಾನ– ತಂತ್ರಜ್ಞಾನದ ಬೆಳವಣಿಗೆಅಗಾಧವಾಗಿದೆ. ಇದರಿಂದ ಅನೇಕ ಉಪಯೋಗಗಳು ಇವೆ’ ಎಂದು ತಿಳಿಸಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷ ಜಿ.ಎಸ್.ಶ್ರೀಧರ್, ‘ಶಿಕ್ಷಣ ಜಾಸ್ತಿಯಾದಷ್ಟು ಮೌಢ್ಯಾಚರಣೆ ಹೆಚ್ಚಾಗುತ್ತಿದೆ. ಜನರ ಆಲೋಚನೆಗಳು ಕಲುಷಿತಗೊಂಡಿವೆ. ಎಲ್ಲರಲ್ಲೂ ವೈಜ್ಞಾನಿಕ ಚಿಂತನೆ ಮೂಡಿಸಬೇಕು. ಮಾನವೀಯ ಮೌಲ್ಯ ಬಿತ್ತುವ ಕೆಲಸ ಮಾಡಬೇಕಿದೆ’ ಎಂದರು.

ಸಾಮಾಜಿಕ ಸಂರಚನೆಯಲ್ಲಿ ಅಸಮಾನತೆ ಸೃಷ್ಟಿ: ‘ಸಾಮಾಜಿಕ ಸಂರಚನೆಯಲ್ಲಿಯೇ ಒಂದು ಅಸಮಾನತೆ, ಅಗೋಚರವಾದ ಹಿಂಸೆ ಇದೆ. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ಬೇಕಾದ ಮನೋಧರ್ಮ ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗಿದೆ’ ಎಂದುಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಅಮಾನವೀಯ ಆಚರಣೆಗಳು, ಸಾಮಾಜಿಕ ಕೇಡುಗಳು, ಅಸಮಾನತೆ ವಿರೋಧಿಸುವುದು, ಧರ್ಮ– ದೇವರ ದುರುಪಯೋಗ ತಪ್ಪಿಸುವುದು ವೈಜ್ಞಾನಿಕ ಮನೋಧರ್ಮ. ದೇವರು ಮತ್ತು ಧರ್ಮದ ಹೆಸರಿನೊಳಗೆ ಆಂತರಿಕ ಶುದ್ಧತೆ ಹುಟ್ಟು ಹಾಕಬೇಕು ಎಂದರು.

ದೇವರು, ಧರ್ಮದ ಹೆಸರಲ್ಲಿ ಜನರ ಮಧ್ಯೆ ಒಡಕು, ದ್ವೇಷ, ಮೇಲು, ಕೀಳು ಸೃಷ್ಟಿ ಮಾಡಿದರೆ ಅದು ವೈಜ್ಞಾನಿಕತೆ ಅನ್ನಿಸುವುದಿಲ್ಲ. ಹೆಣ್ಣು ಮಕ್ಕಳ ಹತ್ಯೆ, ಅತ್ಯಾಚಾರಗಳು ನಡೆಯುತ್ತಿವೆ. ಇವುಗಳನ್ನು ಖಂಡಿಸುವ ನಮ್ಮ ಒಳಗಡೆ ವೈಚಾರಿಕ, ವೈಜ್ಞಾನಿಕ ಮನೋಧರ್ಮ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಚಿಂತಕ ಕೆ.ದೊರೈರಾಜ್, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್, ಉಪಾಧ್ಯಕ್ಷರಾದ ಕೆ.ಜೆ.ರಾವ್‌, ಹಂಪಿಕೆರೆ ರಾಜೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮೋಹನ್‌ ಕುಮಾರ್, ಮಧುಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರೇಣುಕಾಪ್ರಸಾದ್, ರೈತ ಮುಖಂಡ ಟಿ.ಕೆ.ಗಂಗಾಧರ್‌, ಪತ್ರಕರ್ತ ಎಸ್‌.ನಾಗಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.