ADVERTISEMENT

ಚಿಕ್ಕನಾಯಕನಹಳ್ಳಿ: ಸೌಕರ್ಯ ವಂಚಿತ ‘ಸಿದ್ಧ’ ಸಮುದಾಯ

ನಿವೇಶನ ಹಂಚಿಕೆಯಾದರೂ ಮನೆ ಕಟ್ಟಲು ಸಿಗದ ಸಹಾಯಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 8:33 IST
Last Updated 19 ಅಕ್ಟೋಬರ್ 2024, 8:33 IST

ನಿವೇಶನ ಹಂಚಿಕೆಯಾಗಿರುವ ಗುಡ್ಡದ ಮೇಲಿರುವ ಅಲೆಮಾರಿ ಸಿದ್ಧರ ವಸತಿ ಪ್ರದೇಶ

ನಿವೇಶನ ಹಂಚಿಕೆಯಾಗಿರುವ ಗುಡ್ಡದ ಮೇಲಿರುವ ಅಲೆಮಾರಿ ಸಿದ್ಧರ ವಸತಿ ಪ್ರದೇಶ

ಚಿಕ್ಕನಾಯಕನಹಳ್ಳಿ: ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಗುಂಡುತೋಪಿನಲ್ಲಿ ಗುಡಿಸಲುಗಳಲ್ಲಿ ವಾಸವಿದ್ದ ಸಿದ್ಧ ಜನಾಂಗದ ಅಲೆಮಾರಿ ಕುಟುಂಬಗಳನ್ನು ಅಲ್ಲಿಂದ ತೆರವು ಮಾಡಿ, ಕಸಬಾ ಹೋಬಳಿ ದಬ್ಬೇಘಟ್ಟದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ.

ADVERTISEMENT

ಆದರೆ ಇಲ್ಲಿಗೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ನಿವೇಶನ ಹಂಚಿಕೆಯಾದರೂ ಮನೆ ಕಟ್ಟಿಕೊಳ್ಳಲು ಧನಸಹಾಯ ಬಿಡುಗಡೆಯಾಗುತ್ತಿಲ್ಲ. ನಿವೇಶನದ ಹಂಚಿಕೆಯಲ್ಲಿ ಆಗಿರುವ ನಿವೇಶನ-ಅಳತೆಯ ಲೋಪದೋಷವನ್ನು ಸರಿಪಡಿಸುವುದರಲ್ಲೇ ಕಾಲ ಕಳೆಯುವಂತಾಗಿದೆ.

ಹಕ್ಕುಪತ್ರದಲ್ಲಿರುವ ನಿವೇಶನದ ಅಳತೆಗೂ ಮಂಜೂರಾಗಿರುವ ನಿವೇಶನದ ಅಳತೆಗೂ ವ್ಯತ್ಯಾಸವಿದೆ. ಊರ ಮಧ್ಯದಲ್ಲಿ ಬದುಕಿದ್ದ ನಮ್ಮನ್ನು, ನಿವೇಶನ ಮತ್ತು ಸ್ವಂತ ಮನೆಯ ಆಸೆಯಲ್ಲಿ ನಿರ್ಜನ ಬೆಟ್ಟದ ಮೇಲಿನ ಜಾಗಕ್ಕೆ ಸಾಗಹಾಕಲಾಗಿದೆ ಎಂದು ಅಸಹಾಯಕರಾಗಿ ನುಡಿಯುತ್ತಾರೆ ಇಲ್ಲಿನ ಸಿದ್ದರು.

ಅಲೆಮಾರಿ ಮಹಿಳೆಯರ ಸ್ಥಿತಿ: ಸಿದ್ಧರ ಈ ಬಡಾವಣೆಯಲ್ಲಿ ಗರ್ಭಿಣಿ, ಬಾಣಂತಿ, ಮಹಿಳೆಯರು, ಮಕ್ಕಳು, ಹಿರಿಯರು ಸಣ್ಣಸಣ್ಣ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯ ಒದಗಿಬಂದರೆ ಮುಖ್ಯರಸ್ತೆಗೆ ತೆರಳಲು ಸಮರ್ಪಕ ರಸ್ತೆ ಇಲ್ಲ. ಕಚ್ಚಾರಸ್ತೆ ತೀರಾ ಕಿರಿದಾಗಿದ್ದು, ತಗ್ಗು‌-ದಿಣ್ಣೆಗಳಿಂದ ಕೂಡಿದೆ.

‘ಮನೆ ನಿರ್ಮಿಸಿಕೊಳ್ಳಲು ಇನ್ನೂ ನಿವೇಶನದ ಅಳತೆ ಮತ್ತು ಹಂಚಿಕೆ ಬಗೆಹರಿಯುತ್ತಿಲ್ಲ. ಇದರಿಂದಾಗಿ ಧನಸಹಾಯ ಬಿಡುಗಡೆ ಆಗುತ್ತಿಲ್ಲ. ಇದೆಲ್ಲದರ ಪರಿಣಾಮ ಇಲ್ಲಿ ಗುಂಡುತೋಪಿಗಿಂತಲೂ ದುಃಸ್ತರ ಸ್ಥಿತಿ ಇದೆ. ಕನಿಷ್ಠ ಶೌಚಾಲಯ ವ್ಯವಸ್ಥೆ ಇಲ್ಲ. ಇಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸ್ಥಿತಿ ಊಹಿಸಲೂ ಆಗದು. ನಿರ್ಜನ ಗುಡ್ಡದ ಮೇಲೆ ನಿವೇಶನ ಮಾಡಿ, ಸಿದ್ದ ಜನಾಂಗದ ಅಲೆಮಾರಿಗಳನ್ನು ತಂದು ಗುಡ್ಡೆಹಾಕುವ ಅಗತ್ಯವೇನಿತ್ತು’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾತ್ರಿ ಕರಡಿ, ಚಿರತೆ ಮತ್ತು ಮುಳ್ಳುಹಂದಿ ಹಾವಳಿ ಇಲ್ಲಿದೆ. ಇಲ್ಲಿನ ಅಲೆಮಾರಿಗಳು ಪ್ರತಿರಾತ್ರಿ ಬೆಂಕಿ ಹಾಕಿ, ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸಿ ಓಡಿಸುತ್ತಾರೆ.

ಕೋಳಿಫಾರ್ಮ್ ಮತ್ತು ಕುರಿಫಾರ್ಮ್‌ಗಳ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗದಿದ್ದಾಗ ಚಿರತೆಯಂತಹ ಕಾಡುಪ್ರಾಣಿಗಳಿಗೆ ನೇರ ಆಹ್ವಾನ ಸಿಕ್ಕಂತಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಅರುಣ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.