ADVERTISEMENT

ಕೊಡಿಗೇನಹಳ್ಳಿ: ಕಡಗತ್ತೂರಿನ ಕಿಂದರಜೋಗಿ

ಮಕ್ಕಳಲ್ಲಿ ರಂಗಭೂಮಿಯ ಅರಿವು ಬಿತ್ತುತ್ತಿರುವ ನಾಟಕ ಶಿಕ್ಷಣ ಶಿಕ್ಷಕ

ಗಂಗಾಧರ್ ವಿ ರೆಡ್ಡಿಹಳ್ಳಿ
Published 27 ಮಾರ್ಚ್ 2024, 6:35 IST
Last Updated 27 ಮಾರ್ಚ್ 2024, 6:35 IST
ಭಾನುಪ್ರಕಾಶ್
ಭಾನುಪ್ರಕಾಶ್   

ಕೊಡಿಗೇನಹಳ್ಳಿ: ರಂಗಭೂಮಿ ಚಟುವಟಿಕೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಕಡಗತ್ತೂರಿನ ಸರ್ಕಾರಿ ಶಾಲೆಯ ನಾಟಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಮತ್ತು ವೈಜ್ಞಾನಿಕ ನಾಟಕಗಳನ್ನು ನಿರ್ದೇಶಿಸುವುದರ ಮೂಲಕ ಜನಪದ ಕಲೆಗೆ ಹೊಸಹುಟ್ಟು ನೀಡುತ್ತಿದ್ದಾರೆ.

ಕಡಗತ್ತೂರಿನ ಭಾನುಪ್ರಕಾಶ್ ಹುಟ್ಟೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧುಗಿರಿ ಹಾಗೂ ಗ್ರಾಮೀಣ ಭಾಗದಲ್ಲಿ ರಂಗಭೂಮಿಗೆ ಜೀವ ತುಂಬುತ್ತಿದ್ದಾರೆ.

ಸಿನಿಮಾಟೊಗ್ರಫಿಯಲ್ಲಿ ಡಿಪ್ಲೊಮಾ ಜೊತೆಗೆ ನಿನಾಸಂ ಪದವೀಧರರಾಗಿರುವ ಇವರು ರಂಗಭೂಮಿ ದಿಗ್ಗಜ ಬಿ.ವಿ. ಕಾರಂತರ ಶಿಷ್ಯ. ಚಿದಂಬರ ರಾವ್ ಜಂಬೆ, ಅಕ್ಷರ ಹೀಗೆ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಂಗಭೂಮಿಯ ಈ ಕಿಂದರಜೋಗಿಯ ಹಿಂದೆ ಸದಾ ಮಕ್ಕಳ ದಂಡು ಇದ್ದೇ ಇರುತ್ತದೆ.

ADVERTISEMENT

ರಂಗಭೂಮಿ ಮೂಲಕ ಮಕ್ಕಳಲ್ಲಿ ಲವಲವಿಕೆ, ಆತ್ಮಸ್ಥೈರ್ಯ, ಸೃಜನಶೀಲ, ಕ್ರಿಯಾತ್ಮಕ ಕಲ್ಪನೆ, ಶರೀರ ಭಾಷೆ, ಉಚ್ಚಾರಣೆ ಸ್ಪಷ್ಟತೆ ಸಂವಹನದಂತಹ ಚಟುವಟಿಕೆಗಳಲ್ಲಿ ಪಳಗಿಸುತ್ತಿದ್ದಾರೆ.  ಕೋಲಾಟ, ವೀರಗಾಸೆ, ಅಲಾವಿ ಹೆಜ್ಜೆಯಂತಹ ಜನಪದ ಕಲೆಗಳ ಪರಿಚಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಕಲಾ ಪ್ರಕಾರಗಳನ್ನು ಬಳಸಿಕೊಂಡು ಗಡಿಭಾಗದ ಮಕ್ಕಳಲ್ಲಿ ಕನ್ನಡತನ ತುಂಬುವಲ್ಲಿಯೂ ಯತ್ನಿಸುತ್ತಿದ್ದಾರೆ.

‘ಸತ್ರು ಅಂದ್ರೆ ಸಾಯ್ತಾರಾ?’, ‘ಪಂಜರಶಾಲೆ’, ‘ಟೊಳ್ಳುಗಟ್ಟಿ’, ‘ಮೋಜಿನ ಸೀಮೆಯಾಚೆ ಒಂದೂರು’, ‘ಲಾಸ್ಟ್ ಲೀಪ್’, ‘ಗೋವಿನಹಾಡು’, ‘ನಾಯಿತಿಪ್ಪ’, ‘ಬಸವ ಬೆಳಗು’, ‘ಸ್ಮಶಾನ ಕುರುಕ್ಷೇತ್ರಂ’, ‘ಏಕಲವ್ಯ’, ‘ಶ್ರೀರಾಮ ರಾಜ್ಯಾಭಿಷೇಕ’, ‘ಮಾನಧನ ಸುಯೋಧನ’ ಮೊದಲಾದ ನಾಟಕಗಳಿಗೆ ನಿರ್ದೇಶನದ ಜೊತೆಗೆ ‘ಹಂಸ ದಮಯಂತಿ’, ‘ಬಿರುಕು’, ‘ಸ್ಮಶಾನ ಕುರುಕ್ಷೇತ್ರ’, ‘ಪ್ರತಿಮಾ ನಾಟಕಂ’, ‘ಮರ್ಚೆಂಟ್ ಆಫ್ ವೆನಿಸ್’, ‘ಗೆಲಿಲಿಯೊ’ ನಾಟಕಗಳಲ್ಲಿ ನಟನಾಗಿ, ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.

ಅನೇಕ ಮಕ್ಕಳ ಶಿಬಿರಗಳು, ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರ, ಹಲವು ಬೀದಿನಾಟಕಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇವರಿಗೆ ‘ನೇಷನ್ ಬಿಲ್ಡರ್’, ‘ಪ್ರೇರಣ ರತ್ನ’, ‘ಕ್ರಿಯಾತ್ಮಕ ಶಿಕ್ಷಕ’, ‘ವಿದ್ಯಾವಾರಿಧಿ’, ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

ಭಾನುಪ್ರಕಾಶ್ ನಿರ್ದೇಶಿಸಿದ್ದ ಮತದಾನದ ಅರಿವು ಬೀದಿ ನಾಟಕದಲ್ಲಿ ವಿದ್ಯಾರ್ಥಿಗಳು
ತುಮಕೂರಿನಲ್ಲಿ ನಡೆದ ಮತದಾನದ ಜಾಗೃತಿ ಕುರಿತು ನಾಟಕ ಪ್ರದರ್ಶನದ ಸಂದರ್ಭ

ಶಿಕ್ಷಕನಾಗಿ ಕಾರ್ಯನಿರ್ವಹಿಸುವ ಜೊತೆಗೆ ಕಲಾವಿದರನ್ನು ಗುರುತಿಸಿ ಜನಪದ ಕನ್ನಡ ಭಾಷೆಯ ಸೊಗಡು ಹಾಗೂ ರಂಗಭೂಮಿ ಉಳಿಸುವುದು ನನ್ನ ಗುರಿ.

-ಎಸ್.ವಿ.ಭಾನುಪ್ರಕಾಶ್ ನಾಟಕ ಶಿಕ್ಷಣ ಶಿಕ್ಷಕ

ಪರಿಣಾಮಕಾರಿ ಕಲಿಕಾ ಪ್ರಕ್ರಿಯೆ ಅನುಷ್ಠಾನಕ್ಕೆ ಭಾನುಪ್ರಕಾಶ್‌ ಶ್ರಮಿಸುತ್ತಿದ್ದಾರೆ. ಜಿಲ್ಲಾ ರಾಜ್ಯ ಶಿಕ್ಷಣ ಹಾಗೂ ಸಂಶೋದನಾ ಇಲಾಖೆಯಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಜೀವನ ವಿಜ್ಞಾನ ಮುಂತಾದ ತರಬೇತಿ ಸಂಚಿಕೆ ರೂಪಿಸಿದ್ದಾರೆ.

-ಎಚ್.ಆರ್.ಗಂಗಾಧರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ

ನಾಟಕ ಪರಿಣತಿ ನಿರ್ದೇಶನದ ನೈಪುಣ್ಯ ಹೊಂದಿರುವ ಭಾನುಪ್ರಕಾಶ್ ಅವರ ಪ್ರತಿಭೆಯನ್ನು ತಾಲ್ಲೂಕು ಜಿಲ್ಲೆಯ ಸಾಂಸ್ಕೃತಿಕ ಸಂಸ್ಥೆ ಸದುಪಯೋಗಪಡಿಸಿಕೊಳ್ಳಬೇಕಿದೆ.

-ಟಿ.ಲಕ್ಷ್ಮಿನರಸಯ್ಯ ಕಲಾರಂಗದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.