ADVERTISEMENT

‘ಮಹಾಗಣಪತಿ’ಗೆ ಅದ್ದೂರಿ ವಿದಾಯ: ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 6:15 IST
Last Updated 22 ಸೆಪ್ಟೆಂಬರ್ 2024, 6:15 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು</p></div>

ತುಮಕೂರಿನಲ್ಲಿ ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು

   

ತುಮಕೂರು: ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ನಗರದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಸಂಖ್ಯೆಯ ಯುವಕ, ಯುವತಿಯರು ಶೋಭಾಯಾತ್ರೆಗೆ ಮೆರುಗು ತಂದರು.

ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಹಿಂದೂ ಮಹಾಗಣಪತಿ ಸ್ವಾಗತ ಸಮಿತಿಯಿಂದ ಹಿಂದೂ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಸಂಭ್ರಮದ ಮೆರವಣಿಗೆ ಮೂಲಕ ಏಕದಂತನಿಗೆ ವಿದಾಯ ಹೇಳಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌, ರಾಮಕೃಷ್ಣ–ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಟವಿ ಶಿವಲಿಂಗ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ಜಿ.ಕೆ.ಶ್ರೀನಿವಾಸ್‌, ಟಿ.ಬಿ.ಶೇಖರ್‌, ಎಚ್‌.ಎಸ್‌.ರವಿಶಂಕರ್‌, ಮಂಜು ಭಾರ್ಗವ ಇತರರು ಹಾಜರಿದ್ದರು.

ಶೋಭಾಯಾತ್ರೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆನ್ನಿಗೆ ಬ್ಯಾಗ್‌ ನೇತು ಹಾಕಿಕೊಂಡೇ ಡಿ.ಜೆ, ತಮಟೆ ಸದ್ದಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಮೆರವಣಿಗೆ ಸಾಗಿದ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಕಟ್ಟಡಗಳನ್ನು ಹತ್ತಿ ಮೆರವಣಿಗೆ ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮುಸ್ಲಿಮರು ನೀರಿನ ಬಾಟಲಿ ವಿತರಿಸಿ ಭಾವೈಕ್ಯತೆ ಮೆರೆದರು.

‘ಜೈಶ್ರೀರಾಮ್‌, ಗಣಪತಿ ಬಪ್ಪ ಮೋರಿಯಾ’ ಎಂಬ ಘೋಷಣೆಗಳು ಮೊಳಗಿದವು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಗವಾಧ್ವಜ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಛತ್ರಪತಿ ಶಿವಾಜಿ, ಶಿವಕುಮಾರ ಸ್ವಾಮೀಜಿ, ಶ್ರೀರಾಮ, ಸಾವರ್ಕರ್, ಬಾಲಗಂಗಾಧರನಾಥ್‌ ತಿಲಕ್‌ ಭಾವಚಿತ್ರಗಳು ಗಮನ ಸೆಳೆದವು. ಕೋಲಾಟ, ನಾಸಿಕ್‌ ಡೋಲ್‌, ವೀರಗಾಸೆ, ಡಂಕ ವಾದ್ಯ ಹಾಗೂ ಇತರೆ ಕಲಾ ತಂಡಗಳು ಭಾಗವಹಿಸಿದ್ದವು.

ಮೆರವಣಿಗೆಯು ಕಾಲ್‌ಟ್ಯಾಕ್ಸ್‌ ವೃತ್ತ, ಜೆ.ಸಿ.ರಸ್ತೆ, ಮಂಡಿಪೇಟೆ, ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ, ಬಿ.ಎಚ್‌.ರಸ್ತೆಯಿಂದ ಎಂ.ಜಿ.ರಸ್ತೆ, ಗುಂಚಿ ವೃತ್ತ, ಅಂಬೇಡ್ಕರ್‌ ರಸ್ತೆ, ಕೋಟೆ ಆಂಜನೇಯ ವೃತ್ತದ ಮುಖಾಂತರ ಗಾರ್ಡನ್‌ ರಸ್ತೆಯಲ್ಲಿ ಸಾಗಿತು. ಕೆಎನ್‌ಎಸ್‌ ಕಲ್ಯಾಣಿಯಲ್ಲಿ ರಾತ್ರಿ ಗಣಪತಿ ಮೂರ್ತಿ ವಿಸರ್ಜಿಸಲಾಯಿತು.

ತುಮಕೂರಿನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕೇಸರಿ ಶಾಲು ಧರಿಸಿ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾಜಿ ಸಚಿವ ಸೊಗಡು ಶಿವಣ್ಣ ಮುಖಂಡ ಟಿ.ಬಿ.ಶೇಖರ್‌ ಇತರರು ಹಾಜರಿದ್ದರು
ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಮನ ಸೆಳೆದ ಕೋಲಾಟ ಪ್ರದರ್ಶನ
ಪುನೀತ್‌ ಕೆರೆಹಳ್ಳಿ ರಘು ಸಕಲೇಶಪುರ ವಶಕ್ಕೆ
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಬಂದಿದ್ದ ಬಜರಂಗದಳದ ಮುಖಂಡರಾದ ರಘು ಸಕಲೇಶಪುರ ಪುನೀತ್‌ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಯಲ್ಲಿ ಜಿಲ್ಲೆಯ ಹೊರಗಿನವರ ಪಾಲ್ಗೊಳ್ಳುವಿಕೆಗೆ ನಿರ್ಬಂಧ ವಿಧಿಸಲಾಗಿತ್ತು. ನಿರ್ಬಂಧದ ಮಧ್ಯೆ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಯಿತು. ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. 2 ಡಿವೈಎಸ್‌ಪಿ 9 ಇನ್‌ಸ್ಪೆಕ್ಟರ್ 20 ಸಬ್‌ ಇನ್‌ಸ್ಪೆಕ್ಟರ್ 62 ಎಎಸ್ಐ 520 ಪೊಲೀಸ್ ಕಾನ್‌ಸ್ಟೇಬಲ್ 100 ಗೃಹರಕ್ಷಕ ದಳ 3 ಕೆಎಸ್ಆರ್‌ಪಿ 5 ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ರಸ್ತೆ ಬಂದ್‌
ಗಣಪತಿ ವಿಸರ್ಜನಾ ಮೆರವಣಿಗೆ ನಿಮಿತ್ತ ನಗರದ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು. ಬಿ.ಎಚ್‌.ರಸ್ತೆ ಮಂಡಿಪೇಟೆ ಮುಖ್ಯರಸ್ತೆ ಅಶೋಕ ರಸ್ತೆ ಹೊರಪೇಟೆ ರಸ್ತೆಯನ್ನು ಕೆಲ ಕಾಲ ಬಂದ್‌ ಆಗಿತ್ತು. ಬಿ.ಎಚ್‌.ರಸ್ತೆಯ ಮುಖಾಂತರ ಬಸ್‌ ನಿಲ್ದಾಣಕ್ಕೆ ಹೋಗುವವರು ಕೋತಿತೋಪು ಬಾರ್‌ಲೈನ್‌ ರಸ್ತೆ ಎಂ.ಜಿ.ರಸ್ತೆ ಮೂಲಕ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.