ADVERTISEMENT

ತುಮಕೂರು: ಮಹಿಳೆಗೆ ₹8 ಲಕ್ಷ ಮೋಸ

ಪ್ರತ್ಯೇಕ ಪ್ರಕರಣ: ₹12.75 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:18 IST
Last Updated 14 ಜೂನ್ 2024, 14:18 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ‘ಟಾಸ್ಕ್‌ನಲ್ಲಿ ಹಣ ಹೂಡಿಕೆ ಮಾಡಿ, ಷೇರು ಮಾರುಕಟ್ಟೆಯ ಹಣ ವ್ಯವಹಾರದಿಂದ ಉತ್ತಮ ಲಾಭ ಪಡೆಯಬಹುದು’ ಎಂದು ನಂಬಿಸಿ ಜಿಲ್ಲೆಯ ಇಬ್ಬರಿಗೆ ₹12.75 ಲಕ್ಷ ವಂಚಿಸಲಾಗಿದೆ.

ಎಸ್‌.ಎಸ್‌.ಪುರಂ ನಿವಾಸಿ ಸಾವಿತ್ರಿ ಎಂಬುವರು ಫೇಸ್‌ಬುಕ್‌ನಲ್ಲಿ ‘ಎಸ್‌ಎಂಎಸ್‌ ಸ್ಟಾಕ್‌ ಇನ್‌ವೆಸ್ಟ್‌ಮೆಂಟ್‌ ಕ್ಯಾಂಪಸ್‌ 234’ ಎಂಬ ಜಾಹೀರಾತು ನೋಡಿದ್ದಾರೆ. ಅದರಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ್ದು ಅವರನ್ನು ಒಂದು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಎಸ್‌ಎಂಎಸ್‌ ಸ್ಟಾಕ್‌ ಇನ್‌ವೆಸ್ಟ್‌ಮೆಂಟ್‌ ಕ್ಯಾಂಪಸ್‌ 234’ ಸೇರಬೇಕಾದರೆ ಹಣ ಹೂಡಿಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಸಾವಿತ್ರಿ ಹಂತ ಹಂತವಾಗಿ ಒಟ್ಟು ₹8.85 ಲಕ್ಷ ಹಣವನ್ನು ಸೈಬರ್‌ ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಯಾವುದೇ ಕಮಿಷನ್‌ ನೀಡಿಲ್ಲ, ಹಾಕಿದ ಹಣವೂ ವಾಪಸ್‌ ಬಂದಿಲ್ಲ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

ಯುವಕನಿಗೆ ವಂಚನೆ: ನಗರದ ಜಯನಗರ ನಿವಾಸಿ ಎಸ್‌.ಮನೀಷ್‌ ಎಂಬುವರು ಸೈಬರ್‌ ಬಲೆಗೆ ಬಿದ್ದು ₹3.89 ಲಕ್ಷ ಕಳೆದುಕೊಂಡಿದ್ದಾರೆ.

ಟೆಲಿಗ್ರಾಮ್‌ನಲ್ಲಿ ಮೆಸೇಜ್‌ ಮಾಡಿದ ಸೈಬರ್‌ ಆರೋಪಿಗಳು ‘ಕಾಯಿನ್‌–ಡಿಸಿಎಕ್ಸ್‌’ನಲ್ಲಿ ₹1 ಸಾವಿರ ಹೂಡಿಕೆ ಮಾಡಿದರೆ ಹೆಚ್ಚುವರಿಯಾಗಿ ₹500 ನೀಡುವುದಾಗಿ ತಿಳಿಸಿದ್ದಾರೆ. ಮನೀಷ್‌ ಮೊದಲಿಗೆ ₹1 ಸಾವಿರ ಹಣವನ್ನು ಯುಪಿಐ ಐ.ಡಿಗೆ ವರ್ಗಾವಣೆ ಮಾಡಿದ್ದಾರೆ. ಟಾಸ್ಕ್‌ ಪೂರ್ಣಗೊಳಿಸಿದ ನಂತರ ಅವರ ಖಾತೆಗೆ ₹1,500 ಬಂದಿದೆ. ನಂತರ ಮತ್ತೊಮ್ಮೆ ₹5 ಸಾವಿರ ವರ್ಗಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ₹4,600 ಮತ್ತು ₹2,800 ವಾಪಸ್‌ ಹಾಕಿದ್ದಾರೆ.

ಇದೇ ರೀತಿಯಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ಒಟ್ಟು ₹3.89 ಲಕ್ಷ ಹಣವನ್ನು ವಿವಿಧ ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಹಣ ಕೇಳಿದಾಗ ಮತ್ತಷ್ಟು ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಹಾಕಿದ ದುಡ್ಡು ವಾಪಸ್‌ ಬರುವುದಿಲ್ಲ ಎಂಬುವುದು ತಿಳಿದ ಮೇಲೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.