ಪಾವಗಡ: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ ವ್ಯಕ್ತಿಯ ವಿಚಾರಣೆಗೆ ದೆಹಲಿಯಿಂದ ವಿಶೇಷ ಪೊಲೀಸ್ ಅಧಿಕಾರಿಗಳ ತಂಡವೊಂದು ಭಾನುವಾರ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮಕ್ಕೆ ಬಂದಿದೆ.
ಸ್ಥಳೀಯ ಪೊಲೀಸರೊಂದಿಗೆ ಬೆಳಗ್ಗೆ ಗ್ರಾಮಕ್ಕೆ ಬಂದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ನಿರಂಜನ್ (40) ಎಂಬುವರ ಮನೆಗೆ ತೆರಳಿ ವಿಚಾರಣೆ ನಡೆಸಿದರು.
ಕೆಲಹೊತ್ತು ಮನೆಯಲ್ಲಿ ಶೋಧನೆ ನಡೆಸಿದ ಅಧಿಕಾರಿಗಳು ನಂತರ ಅವರ ಸಂಬಂಧಿಕರು, ನೆರೆಹೊರೆಯವರಿಂದ ಮಾಹಿತಿ ಕಲೆ ಹಾಕಿದರು. ನಿರಂಜನ್ ನಡವಳಿಕೆ, ವೃತ್ತಿ, ಚಲನವಲಗಳ ಬಗ್ಗೆ ಗ್ರಾಮದ ಜನರನ್ನು ಪ್ರಶ್ನಿಸಿದರು.
ನಿರಂಜನ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಸದಾ ಮನೆಯಲ್ಲಿಯೇ ಇರುತ್ತಾರೆ. ನೆರೆ ಹೊರೆಯವರೊಂದಿಗೂ ಹೆಚ್ಚು ಮಾತನಾಡುವುದಿಲ್ಲ ಮತ್ತು ಬೆರೆಯುವುದಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಶನಿವಾರ ನಿರಂಜನ್ ಕರೆ ಮಾಡಿ ನಿಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಏನು ನಿಂದಿಸಿದ್ದಾರೆ ಎಂಬ ಮಾಹಿತಿಯನ್ನು ವಿಶೇಷ ತನಿಖಾ ತಂಡ ಬಹಿರಂಗಪಡಿಸಿಲ್ಲ. ಸಂಜೆಯವರೆಗೂ ವಿಶೇಷ ತಂಡ ವಿಚಾರಣೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.