ADVERTISEMENT

ತುಮಕೂರು: ಕೊರೊನಾದಿಂದ ಸತ್ತವರಿಗಿಂತಲೂ ಅಪಘಾತಗಳಿಂದ ಸತ್ತವರೇ ಹೆಚ್ಚು

ಜಿಲ್ಲೆಯಲ್ಲಿ ಕೊರೊನಾಗೆ 231, ರಸ್ತೆ ಅಪಘಾತದಲ್ಲಿ 301 ಮಂದಿ ಸಾವು

ಅನಿಲ್ ಕುಮಾರ್ ಜಿ
Published 16 ಸೆಪ್ಟೆಂಬರ್ 2020, 5:18 IST
Last Updated 16 ಸೆಪ್ಟೆಂಬರ್ 2020, 5:18 IST
ಶಿರಾ ತಾಲ್ಲೂಕಿನ ಬಾಲೇನಹಳ್ಳಿ ಗೇಟ್ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಮಿನಿ ಬಸ್ (ಸಾಂದರ್ಭಿಕ ಚಿತ್ರ)
ಶಿರಾ ತಾಲ್ಲೂಕಿನ ಬಾಲೇನಹಳ್ಳಿ ಗೇಟ್ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಮಿನಿ ಬಸ್ (ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವು ಹೆಚ್ಚು ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಸದ್ದಿಲ್ಲದೆ ಕೊರೊನಾಗಿಂತ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮಾರ್ಚ್‌ನಿಂದ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ 231 ಮಂದಿ ಮೃತಪಟ್ಟಿದ್ದರೆ, ರಸ್ತೆ ಅಪಘಾತದಲ್ಲಿ 301 ಮಂದಿ ಜೀವ ಕಳೆದುಕೊಂಡಿದ್ದಾರೆ. ಕೊರೊನಾಗಿಂತ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಜನರಲ್ಲಿ ಆತಂಕ ತರಿಸಿದೆ.

ಜಿಲ್ಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಪ್ರತಿವರ್ಷ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಜಿಲ್ಲೆಯ ಜನಸಂಖ್ಯೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರು, ಸವಾರರ ಓಡಾಟ ಹೆಚ್ಚಾಗುತ್ತಿದೆ. ಜತೆಗೆ ಪ್ರತಿದಿನ ನೂರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಇದರಿಂದಾಗಿ ಅಪಘಾತ ಪ್ರಮಾಣವೂ ಹೆಚ್ಚಾಗುತ್ತಿದೆ.

ADVERTISEMENT

2019ರಲ್ಲಿ ಜಿಲ್ಲೆಯಲ್ಲಿ 748 ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 2,727 ಮಂದಿ ಗಾಯಗೊಂಡಿದ್ದಾರೆ. ಅದೇ ರೀತಿ 2020ರಲ್ಲಿ ಈವರೆಗೆ 298 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, 1,418 ಮಂದಿ ಗಾಯಗೊಂಡಿದ್ದಾರೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳು ನಡೆಯಬೇಕಿದೆ.

ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಕೊರೊನಾ ಕಾರಣದಿಂದಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಆದರೆ, ಈ ತಿಂಗಳಲ್ಲಿ ಕೇವಲ ಒಬ್ಬರು ಮಾತ್ರವೇ ಕೊರೊನಾದಿಂದ ಮೃತಪಟ್ಟಿದ್ದರು. ಆದರೆ, ರಸ್ತೆ ಅಪಘಾತದಿಂದ ಮೃತಪಟ್ಟವರು ಬರೋಬ್ಬರಿ 69 ಮಂದಿ. ಆದರೆ, ಕೊರೊನಾ ಅಬ್ಬರದ ನಡುವೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತಾರು ಮಂದಿಯ ಸಾವು ಗೌಣವಾಯಿತು.

ಅದೇ ರೀತಿ ಏಪ್ರಿಲ್‌, ಮೇ, ಜೂನ್, ಜುಲೈವರೆಗೂ ಕೊರೊನಾಗಿಂತ ಹೆಚ್ಚಾಗಿ ಜನರು ರಸ್ತೆ ಅಪಘಾತದಲ್ಲಿಯೇ ಮೃತಪಟ್ಟರು. ನಂತರ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ತನ್ನ ವೇಗ ಹೆಚ್ಚಿಸಿಕೊಂಡಿತು. ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದಾಗ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗಿಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯೇ ಹೆಚ್ಚಿದೆ.

ಆದರೆ, ಕೊರೊನಾ ಬಗ್ಗೆ ವಹಿಸುತ್ತಿರುವ ಕಾಳಜಿ, ಎಚ್ಚರಿಕೆಯನ್ನು ರಸ್ತೆ ಅಪಘಾತ ತಡೆಯಲು ಏಕೆ ವಹಿಸುತ್ತಿಲ್ಲ. ಸಾವು ಎಲ್ಲರಿಗೂ ಒಂದೇ ತಾನೇ? ಕೊರೊನಾದಿಂದ ಸಾವನ್ನಪ್ಪುವವರು ಮಾತ್ರವೇ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಾಣುತ್ತದೆ. ರಸ್ತೆ ಅಪಘಾತದಲ್ಲಿ ಮೃತಪಡುವವರು ಏಕೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಎಲ್ಲ ರೀತಿಯ ಮುನ್ನೆಚ್ಚರಿಕೆ

ರಸ್ತೆ ಅಪಘಾತ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ರಸ್ತೆ ಸುರಕ್ಷತಾ ಸಪ್ತಾಹ, ಸಭೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದೇವೆ. ಜತೆಗೆ ಲೋಕೋಪಯೋಗಿ ಇಲಾಖೆ, ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ರಸ್ತೆ ಅಪಘಾತಗಳು ಹೆಚ್ಚು ನಡೆಯುವ ಕಡೆ ಸ್ಥಳ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆದರೆ, ರಸ್ತೆ ಅಪಘಾತ ತಡೆಯಲು ಸಾರ್ವಜನಿಕರ, ಚಾಲಕರ, ಸವಾರರ ಸಹಭಾಗಿತ್ವ, ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ತಿಳಿಸಿದರು.

ಗಂಭೀರವಾಗಿ ಪರಿಗಣಿಸಿ

ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನೇ ಆಶ್ರಯಿಸಿ ಎಷ್ಟೊ ಮಂದಿ ಜೀವನ ಸಾಗಿಸುತ್ತಿರುತ್ತಾರೆ. ಆದರೆ, ಪ್ರತಿ ತಿಂಗಳು ಜಿಲ್ಲೆಯಲ್ಲಿ ಸರಾಸರಿ 50 ಮಂದಿ ಮೃತಪಡುತ್ತಿರುವುದು ಬೇಸರದ ಸಂಗತಿ. ಈ ಬಗ್ಗೆ ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ರಸ್ತೆ ಅಪಘಾತ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಪ್ರಯಾಣಿಕ ಅಮ್ಜಾದ್ ಪಾಷ ಒತ್ತಾಯಿಸಿದರು.

ತಿಂಗಳು; ಕೊರೊನಾ ಸಾವು; ರಸ್ತೆ ಅಪಘಾತ ಸಾವು

ಮಾರ್ಚ್; 01; 69

ಏಪ್ರಿಲ್; 01; 15

ಮೇ; 01; 34

ಜೂನ್; 02; 54

ಜುಲೈ; 52; 52

ಆಗಸ್ಟ್; 107; 61

ಒಟ್ಟು; 164; 285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.