ADVERTISEMENT

10 ಸಾವಿರ ಆಶ್ರಯ ನಿವೇಶನ ವಿತರಣೆಗೆ ಕ್ರಮ: ತುಮಕೂರು ಜಿಲ್ಲಾಧಿಕಾರಿ

188 ಎಕರೆ ಜಮೀನು ಗುರುತು: ಗಾಂಧಿ ಜಯಂತಿಯಂದು ವಿತರಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 14:08 IST
Last Updated 20 ಜೂನ್ 2024, 14:08 IST
ಕುಣಿಗಲ್ ತಾಲ್ಲೂಕು ಸಂತೆಪೇಟೆಯಲ್ಲಿ ನಡೆದ ಜಿಲ್ಲಾಧಿಕಾರಿ ಜನಸ್ಪಂದನದಲ್ಲಿ ಶಾಸಕ ಡಾ.ರಂಗನಾಥ ಮಾತನಾಡಿದರು
ಕುಣಿಗಲ್ ತಾಲ್ಲೂಕು ಸಂತೆಪೇಟೆಯಲ್ಲಿ ನಡೆದ ಜಿಲ್ಲಾಧಿಕಾರಿ ಜನಸ್ಪಂದನದಲ್ಲಿ ಶಾಸಕ ಡಾ.ರಂಗನಾಥ ಮಾತನಾಡಿದರು   

ಕುಣಿಗಲ್: ತಾಲ್ಲೂಕಿನ ಸಂತೆಪೇಟೆ ಗ್ರಾಮದಲ್ಲಿ ಗುರುವಾರ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರೇ ಜನರ ಸಮಸ್ಯೆ ಆಲಿಸಿ, ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರು.

ಬೆಳೆ ವಿಮೆ ಮಾಡಿಸುವಲ್ಲಿ ರೈತರು ನಿರ್ಲಕ್ಷ್ಯ ತೋರುತ್ತಿದ್ದು, ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸುವಂತೆ ಶಾಸಕರು ಮನವಿ ಮಾಡಿದರು.

‘ತಾಲ್ಲೂಕಿನ ನೀರಿನ ಸಮಸ್ಯೆಗಳಿಗೆ ಪರಿಹಾರವಾಗಿರುವ ಸಂಪರ್ಕ ಕಾಲುವೆಗೆ ಜಿಲ್ಲೆಯ ಇತರ ತಾಲ್ಲೂಕಿನವರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಂಪರ್ಕ ಕಾಲುವೆಗಾಗಿ ಪ್ರಾಣ ಮುಡುಪಾಗಿಡಲಾಗುವುದು. ತಾಲ್ಲೂಕಿನ ಪಾಲಿನ ನೀರಿಗಾಗಿ ಜನರ ಕೂಗು ಸಹ ಅಗತ್ಯ’ ಎಂದರು.

ADVERTISEMENT

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಶಾಸಕರು ತಾಲ್ಲೂಕಿನಲ್ಲಿ ಅಕ್ಟೋಬರ್ 2ರಂದು ಹತ್ತು ಸಾವಿರ ಆಶ್ರಯ ನಿವೇಶನ ವಿತರಿಸುವ ಗುರಿ ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರಿ ಜಮೀನು ಗುರುತಿಸಲಾಗುತ್ತಿದೆ. ಈವರೆಗೆ 188 ಎಕರೆ ಜಮೀನು ಗುರುತಿಸಲಾಗಿದೆ. ಉಳಿಕೆ ಜಮೀನು ಗುರುತಿಸುವ ಕಾರ್ಯ ಮುಂದುವರೆದಿದೆ. ಪೌತಿ ಖಾತೆ ಆಂದೋಲನ ನಡೆಸಿ 15 ದಿನಗಳಲ್ಲಿ ಖಾತೆ ನೀಡುವಂತೆ ಸಾಮಾಜಿಕ ಭದ್ರತಾ ಯೋಜನೆಗಳ ಲೋಪ ಸರಿಪಡಿಸಿ ಸಕಾಲದಲ್ಲಿ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಸ್ಥರು ಶೌಚಾಲಯಗಳನ್ನು ನಿರ್ಮಿಸಿಕೊಂಡು ವರ್ಷಗಳೇ ಕಳೆದಿದ್ದರೂ ಬಿಲ್ ಬಂದಿಲ್ಲ. ಹೊಸ ಶೌಚಾಲಯ, ದನದ ಕೊಟ್ಟಿಗೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುತ್ತಿಲ್ಲ. ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮಸ್ಯೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನ ಜಾಗ ಗುರುತಿಸಿ ಸಂರಕ್ಷಣೆ ಮಾಡವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ನರೇಗಾದಲ್ಲಿ ಕಾಮಗಾರಿ ಮಾಡಿದ್ದರೂ ಹಣ ಪಾವತಿಯಾಗಿಲ್ಲ ಎಂದು ದೂರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃಷ್ಣವೇಣಿ, ಉಪಾಧ್ಯಕ್ಷ ಕೆಂಪಣ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.