ADVERTISEMENT

ಎತ್ತ ಹೋದವು ಎತ್ತಿನಗಾಡಿ...

ಜನರ ಮನಸ್ಸಿನಿಂದ ದೂರ: ಪಳೆಯುಳಿಕೆ ಸಾಲಿಗೆ ಸೇರಿದ ಚಕ್ಕಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 7:47 IST
Last Updated 28 ಜನವರಿ 2024, 7:47 IST
ಎತ್ತಿನಗಾಡಿ
ಎತ್ತಿನಗಾಡಿ   

ಹುಳಿಯಾರು: ಒಂದು ಕಾಲದಲ್ಲಿ ಜನರ ಕೃಷಿ ಬದುಕಿನ ಭಾಗವಾಗಿ ಪ್ರಯಾಣದ ಸಂಗಾತಿಯಾಗಿದ್ದ ಎತ್ತಿನಗಾಡಿ (ಚಕ್ಕಡಿ) ಸದ್ಯ ಜನಮಾನಸದಿಂದ ಕಣ್ಮರೆಯಾಗಿವೆ. ದಿಬ್ಬಣಕ್ಕೆ ತಲುಪಿಸಲೂ ಸಹಕಾರಿಯಾಗಿದ್ದ ಚಕ್ಕಡಿ ಈಗ ಪಳೆಯುಳಿಕೆಯ ಸಾಲಿಗೆ ಸೇರಿದೆ.

ಗಡಗಡ ಸದ್ದಿನೊಂದಿಗೆ ಉತ್ಸಾಹದಿಂದ ಎತ್ತುಗಳ ಮುನ್ನುಗ್ಗಿ ಹೋಗುತ್ತಿದ್ದರೆ, ಅವುಗಳ ಕೊರಳಲ್ಲಿ ಕಟ್ಟಿದ್ದ ಗೆಜ್ಜೆನಾದ ಹಾಗೂ ಚಕ್ರದ ಕಿಲಕಿಲ ಸದ್ದನ್ನು ಆನಂದಿಸಿದ ಹಿರಿಯರಿಗೆ ಈಗಲೂ ಆ ದನಿ ಕಿವಿಯಲ್ಲಿ ರಿಂಗಣಿಸುತ್ತದೆ. ರೈತರಿಗೆ ವರವಾಗಿದ್ದ ಎತ್ತಿನ ಗಾಡಿಗಳನ್ನು ಇಂದು ಕೇವಲ ಪ್ರದರ್ಶನಗಳಲ್ಲಿ ನೋಡುವಂತಾಗಿದೆ.

ಹಿಂದಿನ ಕಾಲದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಹುತೇಕ ಎತ್ತಿನಗಾಡಿಗಳನ್ನು ಆಶ್ರಯಿಸಿದ್ದರು. ದೈನಂದಿನ ಬದುಕಿಗೆ ಕೃಷಿ ಪರಿಕರ ಸಾಗಿಸುವುದರಿಂದ ಹಿಡಿದು ಹುಲ್ಲು, ಧಾನ್ಯಗಳನ್ನು ಮನೆಗೆ ಸಾಗಿಸಲು ಉಪಕಾರಿಯಾಗಿತ್ತು. ರೈತರು ಗೊಬ್ಬರ, ತೆಂಗು ಸೇರಿದಂತೆ ಅನೇಕ ಬೆಳೆಗಳನ್ನು ಸಾಗಿಸಲು ಎತ್ತಿನಗಾಡಿಗಳೇ ಬೇಕಾಗಿತ್ತು.

ADVERTISEMENT

ಹಬ್ಬ, ಜಾತ್ರೆ, ಮದುವೆ, ಮೆರವಣಿಗೆಯಂತಹ ಸಮಾರಂಭಗಳಿಗೆ ಎತ್ತಿನಗಾಡಿ ಸಂಭ್ರಮವೇ ಆಗಿತ್ತು. ಚಿಕ್ಕನಾಯಕನಹಳ್ಳಿ ತಾಲ್ಲೂಕು ತೆಂಗಿನಸೀಮೆಯಾದ ಕಾರಣ ತೆಂಗಿನಕಾಯಿ, ಕೊಬ್ಬರಿ ಇವುಗಳನ್ನು ಎಷ್ಟಿದ್ದರೂ ಎತ್ತಿನಗಾಡಿಗಳಲ್ಲಿ ಸಾಗಿಸುತ್ತಿದ್ದರು.

ಜಾತ್ರೆ ಸೇರಿದಂತೆ ಇತರ ಶುಭಕಾರ್ಯಗಳಿಗೆ ಮುಂಜಾನೆ ಎದ್ದು ಊಟದ ಗಂಟು ಸಜ್ಜುಗೊಳಿಸಿಕೊಂಡು ನಿಗದಿಪಡಿಸಿಕೊಂಡ ಜಾತ್ರೆ ಅಥವಾ ಸ್ಥಳ ತಲುಪಲು ನಿಗದಿಯ ಸಮಯಕ್ಕೆ ಹೊರಡುತ್ತಿದ್ದರು. ಶುಭಕಾರ್ಯ ಮುಗಿಸಿಕೊಂಡು ಸಂಜೆವೇಳೆಗೆ ಮನೆಗೆ ಹಿಂದಿರುಗಿ ಸಂಭ್ರಮಿಸುತ್ತಿದ್ದರು. ಎತ್ತಿನಗಾಡಿಯ ಜೋಡಿಯಾಗಿರುವ ಎತ್ತು ಮಾತ್ರ ಉಳಿದಿದ್ದು, ಗಾಡಿಗಳು ಕಾಣೆಯಾಗಿವೆ.

ಎತ್ತಿನಗಾಡಿ ತಯಾರಿಸಿ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಜನರು ಇಂದು ಉದ್ಯೋಗದಿಂದ ವಂಚಿತರಾಗಿ ಬೇರೆ ಬೇರೆ ಕಸುಬುಗಳನ್ನು ಆಶ್ರಯಿಸುತ್ತಿದ್ದಾರೆ. ಎತ್ತಿನಗಾಡಿಗಳನ್ನು ಸುಂದರವಾಗಿ ರೂಪಿಸುತ್ತಿದ್ದ ಬಡಗಿಗಳು, ಗಾಡಿಗಳಿಗೆ ಪೂರಕವಾಗಿ ಚಕ್ರಗಳಿಗೆ ಕಬ್ಬಿಣದ ಹೊದಿಕೆಯನ್ನು ಆಗಾಗ ಬಿಗಿಗೊಳಿಸಿ ಜೀವನ ಸಾಗಿಸುತ್ತಿದ್ದ ಕುಲುಮೆದಾರರು ಬೇರೆ ಕೆಲಸಗಳತ್ತ ಹೊರಳುವಂತಾಗಿದೆ.

ನಗರಗಳ ಬಸ್‌ನಿಲ್ದಾಣಗಳಲ್ಲಿ ಒಂಟೆತ್ತಿನ ಗಾಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಹಮಾಲರಿಗೂ ಈಗ ಉದ್ಯೋಗವಿಲ್ಲ. ಎತ್ತಿನಗಾಡಿಗಳು ಮರೆಯಾದಂತೆ ಎತ್ತುಗಳಿಗೆ ಕಷ್ಟದ ಕೆಲಸ ಇಲ್ಲವಾಗಿ ಅವುಗಳ ಪಾದ ಸವೆಯದಂತೆ ಲಾಳ ಕಟ್ಟುವಲ್ಲಿ ನಿರತರಾಗಿದ್ದವರೂ ಮರೆಯಾಗುತ್ತಿದ್ದಾರೆ. ಚಕ್ಕಡಿಗಳ ಸ್ಥಾನವನ್ನು ಈಗ ಆಟೊ, ಟ್ರಾಕ್ಟರ್‌, ಗೂಡ್ಸ್‌ ಆವರಿಸಿಕೊಂಡಿವೆ. ಅಪರೂಪಕ್ಕೆ ಕಾಣಸಿಗುವ ಎತ್ತಿನಗಾಡಿಯನ್ನು ಜನರೀಗ ಹು‌ಬ್ಬೇರಿಸಿ ನೋಡುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಎತ್ತಿನಗಾಡಿ ಪಳೆಯುಳಿಕೆ
ಟಿ.ನಾರಾಯಣಪ್ಪ ಅಧ್ಯಕ್ಷರು ಹೋಬಳಿ ಕಸಾಪ ಹುಳಿಯಾರು.

ಆಹ್ಲಾದಕರ ಪ್ರಯಾಣ... ಚಿಕ್ಕಂದಿನಲ್ಲಿ ಜಾತ್ರೆ ಸೇರಿದಂತೆ ಶುಭಕಾರ್ಯಗಳಿಗೆ ಹೋಗಲು ಎತ್ತಿನಗಾಡಿಗಳನ್ನು ಬಳಸುತ್ತಿದ್ದರು. ಗಾಡಿ ಹಾಗೂ ಎತ್ತುಗಳನ್ನು ಸಿಂಗರಿಸಿಕೊಂಡು ಗ್ರಾಮೀಣ ರಸ್ತೆಗಳಲ್ಲಿ ಹೋಗುತ್ತಿದ್ದರೆ ಅದರ ಮಜವೇ ಬೇರೆಯಿತ್ತು. ಗಾಡಿಯಲ್ಲಿ ಕುಳಿತು ಸುಂದರ ಪರಿಸರ ವೀಕ್ಷಿಸುತ್ತಾ ಸಾಗುವುದು ಆಹ್ಲಾದಕರವಾಗಿತ್ತು. ಈಗ ವಾಹನಗಳ ಹೊಗೆ ಕುಡಿಯುತ್ತಾ ಸಿಮೆಂಟ್‌ ರಸ್ತೆಯಲ್ಲಿ ಸಾಗುವುದೇ ತ್ರಾಸವಾಗಿದೆ. ಟಿ.ನಾರಾಯಣಪ್ಪ ಕಸಾಪ ಹೋಬಳಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.