ತುಮಕೂರು: ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ಪಾಯಿಂಟ್ ಸ್ಥಾಪಿಸಬೇಕು ಎಂಬ ಯುಜಿಸಿ ಸೂಚನೆಗೆ ಎಐಡಿಎಸ್‌ಒ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.
ಆಡಳಿತ ಪಕ್ಷದ ನಾಯಕರನ್ನು ಬಿಂಬಿಸುವ ಯುಜಿಸಿ ಸೂಚನೆ ಅಪ್ರಜಾತಾಂತ್ರಿಕವಾಗಿದೆ. ದೇಶದ ಶೈಕ್ಷಣಿಕ ವ್ಯವಸ್ಥೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಬಗೆಹರಿಸುವುದರ ಬದಲು ವ್ಯಕ್ತಿ ಪೂಜೆ, ಒಂದು ವಿಚಾರಧಾರೆ, ಏಕಮುಖ ಚಿಂತನೆಯಲ್ಲಿ ದೇಶದ ವಿದ್ಯಾರ್ಥಿ, ಯುವ ಜನತೆಯನ್ನು ಮುಳುಗಿಸುವ ಅಪಾಯಕಾರಿ ನಡೆಯಾಗಿದೆ ಎಂದು ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣದ ವ್ಯಾಪಾರೀಕರಣ, ಖಾಸಗೀಕರಣ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಯುಜಿಸಿ ಕಾರ್ಯಪ್ರವೃತ್ತವಾಗಬೇಕು. ರಾಜಕೀಯ ನಾಯಕರನ್ನು ಬಿಂಬಿಸುವ ಬದಲಿಗೆ ದೇಶದ ಶಿಕ್ಷಣದ ಏಳಿಗೆಗೆ ಶ್ರಮಿಸಿದ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನರಾಯ್, ಭಗತ್ ಸಿಂಗ್ ಮುಂತಾದವರ ಚಿಂತನೆಗಳನ್ನು ವಿದ್ಯಾರ್ಥಿಗಳ ಮಧ್ಯೆ ಹರಡುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.