ಚಿಕ್ಕನಾಯಕನಹಳ್ಳಿ: ಪಟ್ಟಣದ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ಸ್ಪರ್ಧಿ ಗಗನ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ನಟಿ ಪ್ರೇಮಾ ಮತ್ತಿತರರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ರಿಯಾಲಿಟಿ ಶೋ ಸ್ಪರ್ಧಿ ಗಗನ ದೃಶ್ಯವೊಂದರ ನಟನೆಯಲ್ಲಿ ‘ಮ್ಯಾಕನಿಕ್‌ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು...’ ಎಂಬ ಮಾತುಗಳನ್ನು ಆಡುತ್ತಾಳೆ. ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ. ಶ್ರಮಿಕವರ್ಗದ ದುಡಿಮೆಯ ಬಗ್ಗೆ, ವೃತ್ತಿಯ ಬಗ್ಗೆ ಹೀಗೆ ತಿರಸ್ಕಾರದ, ಕುಹಕದ ಮತ್ತು ನಿಂದನಾತ್ಮಕ ಮಾತುಗಳನ್ನು ಆಡಿರುವ ಸ್ಪರ್ಧಿ ಹಾಗೂ ಆಕೆಯ ಮಾತುಗಳಿಗೆ ಉತ್ತೇಜನ ನೀಡಿದ ನಿರೂಪಕಿ, ನಿರ್ದೇಶಕರು, ನಿರ್ಮಾಪಕರು, ತೀರ್ಪುಗಾರರು ಹಾಗೂ ವಾಹಿನಿಯ ವಿರುದ್ಧ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದೂರು ದಾಖಲಿಸಿದ್ದಾರೆ.
ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಸಮುದಾಯಗಳ ನಡುವೆ ದ್ವೇಷಭಾವನೆ ಬಿತ್ತುವ ಹಾಗೂ ಶ್ರಮಿಕರನ್ನು ಅವಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ಪಟ್ಟಣದ ಠಾಣೆಯ ಮೂಲಕ ದೂರು ಸಲ್ಲಿಸಿದ್ದಾರೆ.
ಸಂಘದ ಅಧ್ಯಕ್ಷರಾದ ನಿಸಾರ್ ಅಹಮದ್, ಉಪಾಧ್ಯಕ್ಷ ಸಫೀರ್ ಉಲ್ಲಾ, ಕಾರ್ಯದರ್ಶಿ ಮೋಮಿನ್, ನಿರ್ದೇಶಕ ಚಂದ್ರು, ಮೌಸಿದ್ ಖಾನ್, ಚೇತನ್, ಇಸ್ಮಾಯಿಲ್ ಜ಼ಬಿವುಲ್ಲಾ, ಚೆನ್ನಾಚಾರ್, ಯೋಗೀಶ್, ದಸ್ತಗೀರ್ ಸಾಬ್, ಅಬ್ಬು, ಛೋಟು, ದಸಂಸ ತಾಲ್ಲೂಕು ಸಂಚಾಲಕ ಸಿ.ಎಸ್. ಲಿಂಗದೇವರು ಹಾಜರಿದ್ದರು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.