ADVERTISEMENT

ಹೆದ್ದಾರಿ ದಟ್ಟಣೆ ತಗ್ಗಿಸಲು ಪರ್ಯಾಯ ವ್ಯವಸ್ಥೆ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 4:58 IST
Last Updated 7 ಜುಲೈ 2024, 4:58 IST
<div class="paragraphs"><p>ವಿ.ಸೋಮಣ್ಣ</p></div>

ವಿ.ಸೋಮಣ್ಣ

   

ತುಮಕೂರು: ಬೆಂಗಳೂರಿನ ಮಾದಾವರ– ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ತಿಂಗಳಲ್ಲಿ ಮಂಡನೆಯಾಗುವ ಕೇಂದ್ರದ ಬಜೆಟ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತಹ ಯೋಜನೆ ಪ್ರಕಟವಾಗಲಿದೆ. ಏನೆಲ್ಲ ಮಾಡಬಹುದು ಎಂಬ ವಿವರಗಳನ್ನು ಬೆಜೆಟ್‌ನಲ್ಲಿ ಸೇರಿಸಲಾಗುತ್ತದೆ’ ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು, ಮಾದವರದಿಂದ ತುಮಕೂರು ತಲುಪಲು 2–3 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಬಸ್, ಲಾರಿ, ಟ್ರಕ್ ಸೇರಿದಂತೆ ಯಾವುದೇ ವಾಹನ ಸಂಚರಿಸಲು ಪ್ರಯಾಸ ಪಡಬೇಕಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈಲ್ವೆಗೆ ಹಣ: ತುಮಕೂರು– ರಾಯದುರ್ಗ, ತುಮಕೂರು– ಚಿತ್ರದುರ್ಗ– ದಾವಣಗೆರೆ ರೈಲು ಮಾರ್ಗಕ್ಕೆ ಈ ವರ್ಷ ₹600 ಕೋಟಿ ಖರ್ಚು ಮಾಡಲಾಗುತ್ತಿದೆ. 2026ಕ್ಕೆ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಾಯದುರ್ಗ ಯೋಜನೆಯಲ್ಲಿ ಭೂಸ್ವಾಧೀನ ವಿಳಂಬವಾಗಿದೆ. ಕೊರಟಗೆರೆ, ಮಧುಗಿರಿ ಭಾಗದಲ್ಲಿ ಇನ್ನೂ ಜಮೀನು ಕೊಡಬೇಕಿದೆ ಎಂದರು.

ದಾವಣಗೆರೆ ರೈಲ್ವೆ ಮಾರ್ಗದ ಯೋಜನೆಗೆ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇನ್ನೂ ಜಿಲ್ಲೆಯಲ್ಲೂ ಈ ಕೆಲಸ ಪೂರ್ಣಗೊಳಿಸಬೇಕಿದೆ. ರೈಲ್ವೆ ಅಧಿಕಾರಿಗಳ ಜತೆ ಚರ್ಚಿಸಿ ವೇಗ ನೀಡಲಾಗುವುದು ಎಂದು ಹೇಳಿದರು.

‘ಗತಿಶಕ್ತಿ’ ಯೋಜನೆಯಲ್ಲಿ ರೈಲು ನಿಲ್ದಾಣಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ 7 ನಿಲ್ದಾಣಗಳನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ಈ ಕೆಲಸ ನಡೆಯಲಿದೆ. ನಗರದ ರೈಲು ನಿಲ್ದಾಣವನ್ನೂ ಉನ್ನತೀಕರಿಸಲಾಗುತ್ತಿದೆ ಎಂದು ತಿಳಿಸಿದರು.

ರೈಲು ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಮುಂದುವರಿಸುವುದು, ತುಮಕೂರು– ಬೆಂಗಳೂರು ನಡುವೆ ಚತುಷ್ಪಥ ರೈಲ್ವೆ ಮಾರ್ಗ ನಿರ್ಮಾಣ, ಸಾಮಾನ್ಯ ರೈಲುಗಳಿಗೆ ಬೋಗಿಗಳ ಹೆಚ್ಚಳ, ತುಮಕೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿವರಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು.

ಜಿಲ್ಲೆಯಲ್ಲೇ ವಿಮಾನ ನಿಲ್ದಾಣ

ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆದರೆ ಇಂತಹ ಸಮಯದಲ್ಲೇ ತಮಿಳುನಾಡು ಸರ್ಕಾರ ಹೊಸೂರು ಬಳಿ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಹೇಳುತ್ತಿದೆ ಎಂದು ಸೋಮಣ್ಣ ತಿಳಿಸಿದರು. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ದಾಬಸ್‌ಪೇಟೆ ಬಳಿ ಬೃಹತ್ ಮಟ್ಟದಲ್ಲಿ ಕೈಗಾರಿಕಾ ಕೇಂದ್ರ ನಿರ್ಮಾಣವಾಗುತ್ತಿದೆ. ಇದು ದೇಶದಲ್ಲೇ ದೊಡ್ಡ ಕೈಗಾರಿಕಾ ಪ್ರದೇಶವಾಗಿ ರೂಪುಗೊಳ್ಳಲಿದೆ. ಇದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದರೆ ಸಹಕಾರಿಯಾಗುತ್ತದೆ. ಅದಕ್ಕಾಗಿ ಪ್ರಯತ್ನ ಮುಂದುವರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.