ಕುಣಿಗಲ್: ಪಟ್ಟಣದಲ್ಲಿ ಹಾದು ಹೋಗಿರುವ ಹಳೆ ರಾಷ್ಟ್ರೀಯ ಹೆದ್ದಾರಿ– 48 ಸೇರಿದಂತೆ ರಾಜ್ಯ ಹೆದ್ದಾರಿ 33ರ ವಿಸ್ತರಣೆಯಾಗಿದ್ದರೂ, ಪಾದಚಾರಿ ಮಾರ್ಗ ಮಾಯಾವಾಗಿದೆ. ಸುಗಮ ಸಂಚಾರಕ್ಕೆ ಸವಾರರ ಪರದಾಟ ತಪ್ಪಿಲ್ಲ.
ಪಟ್ಟಣದಲ್ಲಿ ಈ ಮೊದಲು ರಾಷ್ಟ್ರೀಯ ಹೆದ್ದಾರಿ– 48 ಹಾದು ಹೋಗಿದ್ದು, ಪಟ್ಟಣದಲ್ಲಿ 60 ಅಡಿ ರಸ್ತೆ ಮಾರ್ಗದಲ್ಲೇ ಬೆಂಗಳೂರು- ಮಂಗಳೂರು ವಾಹನಗಳ ಸಂಚಾರ ವ್ಯವಸ್ಥೆ ಇತ್ತು. ನಂತರ ರಾಷ್ಟ್ರೀಯ ಹೆದ್ದಾರಿ 48ರ ಬದಲಾಗಿ 75 ರಸ್ತೆಯಾಗಿದ್ದು, ಕುಣಿಗಲ್ ಬೈಪಾಸ್ ನಿರ್ಮಾಣವಾಗಿದೆ.
ಬಿ.ಬಿ.ರಾಮಸ್ವಾಮಿ ಗೌಡ ಶಾಸಕರಾಗಿದ್ದಾಗ ರಾಷ್ಟ್ರೀಯ ಹೆದ್ದಾರಿ– 48 ಅನ್ನು ರಸ್ತೆ ಮಧ್ಯಭಾಗದಿಂದ 55 ಅಡಿ ವಿಸ್ತರಿಸಲು ಯೋಜನೆ ರೂಪಿಸಿದ್ದರು. ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಕಾರಣ ಯೋಜನೆ ಸ್ಥಗಿತಗೊಂಡಿತ್ತು. ನಂತರ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದ ಕಾರಣ ನನೆಗುದಿಗೆ ಬಿದ್ದಿತ್ತು.
ಬಹುತೇಕ ಮಾಲೀಕರು ತಮ್ಮ ಜಾಗದ ಮುಂದಿನ ಜಾಗವನ್ನು ಅತಿಕ್ರಮಿಸಿಕೊಂಡ ಪರಿಣಾಮ ಇಂದು ವಾಹನ ನಿಲುಗಡೆಗೆ, ಪಾದಚಾರಿಗಳ ಬಳಕೆಗೆ ಮಾರ್ಗವೇ ಇಲ್ಲವಾಗಿದೆ.
ರಾಜ್ಯ ಹೆದ್ದಾರಿ 33ರ ಮದ್ದೂರು ರಸ್ತೆಯಲ್ಲಿ ಕೆ.ಶಿಫ್ ವತಿಯಿಂದ ರಸ್ತೆ ಅಭಿವೃದ್ದಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಲಕ್ಷಾಂತರ ರೂಪಾಯಿ ಪರಿಹಾರ ಧನ ಪಡೆದು ಜಾಗವನ್ನು ಬಿಟ್ಟುಕೊಟ್ಟಿದ ಮಾಲೀಕರು ಮತ್ತೆ ಜಾಗವನ್ನು ಅತಿಕ್ರಮಿಸಿಕೊಂಡಿರುವುದರಿಂದ ಪಾದಚಾರಿ ಮಾರ್ಗ ಮಾಯವಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಹಳೆ ರಾಷ್ಟ್ರೀಯ ಹೆದ್ದಾರಿ 48ರ ಲೋಕೋಪಯೋಗಿ ಇಲಾಖೆ ಕಚೇರಿಯಿದ ಕುವೆಂಪು ನಗರ, ರಾಜ್ಯ ಹೆದ್ದಾರಿ 33ರ ತುಮಕೂರು- ಮದ್ದೂರು ರಸ್ತೆಯಲ್ಲಿ ವಾಹನ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಜೆ ದಿನಗಳಲ್ಲಿ ದಟ್ಟಣೆ ಇದ್ದು, ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಗ್ರಾಮದೇವತಾ ವೃತ್ತದಿಂದ ಹುಚ್ಚಮಾಸ್ತಿಗೌಡ ವೃತ್ತದವರೆಗೆ ಸಂಚಾರ ದೀಪ ಮತ್ತು ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಪುರಸಭೆಯಿಂದ ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದರೂ ಸಂಬಂದಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯ ಸಂತೆ ಮೈದಾನ ಮತ್ತು ದೊಡ್ಡಪೇಟೆ ರಸ್ತೆಗಳಲ್ಲೂ ವ್ಯಾಪಾರಿಗಳು ರಸ್ತೆಬದಿ ಚರಂಡಿಗಳನ್ನು ಮುಚ್ಚಿ ಅಂಗಡಿಗಳನ್ನು ವಿಸ್ತರಿಸಿದ್ದಾರೆ. ಸಾರ್ವಜನಿಕರು ವಾಹನ ಸವಾರರೂ ಸಂಚರಿಸಲು ಪರದಾಡುತ್ತಿದ್ದಾರೆ ಎಂದು ಆನಂದ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.