ಕೊರಟಗೆರೆ: ’ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣನಲ್ಲ. ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ’ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ’ಹಿಂದೆ ಸಮಿಶ್ರ ಸರ್ಕಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ದೆಹಲಿ ವರಿಷ್ಠರು ತೀರ್ಮಾನಿಸಿದರು. ದೇವೇಗೌಡರ ಗೆಲುವಿಗೆ ವರಿಷ್ಠರ ಆದೇಶದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅವರನ್ನು ಕಣ್ಣೀರು ಹಾಕಿಸಿದ್ದು ನಾನಲ್ಲ. ಯಾರು ಹಾಕಿಸಿದ್ದು ದೇವೇಗೌಡರು ಸ್ವಷ್ಟವಾಗಿ ಹೇಳಬೇಕು. ಅಂದು ತುಮಕೂರಿನಲ್ಲಿ ಜೆಡಿಎಸ್ ಶಾಸಕರುಗಳಿದ್ದ ಕೆಲವು ಕ್ಷೇತ್ರಗಳಲ್ಲಿ ಅವರಿಗೆ ಮುನ್ನಡೆ ಬಂದಿಲ್ಲ. ಈ ಬಗ್ಗೆ ಸಿ.ಎಂ.ಇಬ್ರಾಹಿಂ ಮೊದಲು ಆಲೋಚನೆ ಮಾಡಲಿ’ ಎಂದರು.
ಕ್ಷೇತ್ರದ ಎಲ್ಲ ವರ್ಗದ ಜನರು ನನ್ನ ಜೊತೆ ಇದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿದ್ದೇನೆ. ಪಕ್ಷದ ನಾಯಕರಾದ ಸಿದ್ದರಾಮಯ್ಯ ಕೊರಟಗೆರೆ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಕೆಪಿಸಿಸಿ ಸದಸ್ಯ ಟಿ.ಡಿ.ಪ್ರಸನ್ನಕುಮಾರ್ ಮುಖಂಡರಾದ ವಾಲೆ ಚಂದ್ರಯ್ಯ, ಕೃಷ್ಞಪ್ಪ, ನವೀನ್, ಗೊಂದಿಹಳ್ಳಿ ರಂಗರಾಜು, ಜಟ್ಟಿಅಗ್ರಹಾರ ನಾಗರಾಜು, ಚಂದ್ರು, ಪುಟ್ಟಣ, ಅಖಂಡಾರಾಧ್ಯ, ವಿನಯ್ಕುಮಾರ್, ಮಂಜುನಾಥ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.