ADVERTISEMENT

ಒಂದೇ ತಿಂಗಳಲ್ಲಿ ₹2 ಕೋಟಿಗೂ ಅಧಿಕ ವಂಚನೆ, ಸೈಬರ್‌ ಜಾಲ ಮತ್ತಷ್ಟು ಸಕ್ರಿಯ

ಬೆಂಬಿಡದ ಸೈಬರ್‌ ಭೂತ

​ಪ್ರಜಾವಾಣಿ ವಾರ್ತೆ
Published 6 ಮೇ 2024, 5:09 IST
Last Updated 6 ಮೇ 2024, 5:09 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಜಿಲ್ಲೆಯ ಜನರನ್ನು ಸೈಬರ್‌ ಭೂತ ಇನ್ನಿಲ್ಲದಂತೆ ಕಾಡುತ್ತಿದೆ. ಸೈಬರ್‌ ವಂಚಕರ ಜಾಲ ಮತ್ತಷ್ಟು ಸಕ್ರಿಯವಾಗಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ₹2 ಕೋಟಿಗೂ ಹೆಚ್ಚು ಹಣ ದೋಚಿದ್ದಾರೆ.

ಕಳೆದ 30 ದಿನಗಳ ಅಂತರದಲ್ಲಿ 17 ಜನರಿಗೆ ₹2,01,43,903 ವಂಚಿಸಿರುವ ಬಗ್ಗೆ ಸೈಬರ್‌ ಠಾಣೆಯಲ್ಲಿ 17 ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ನಿರುದ್ಯೋಗಿಗಳು ಉದ್ಯೋಗದ ಆಸೆಗೆ ಬಲಿಯಾಗುತ್ತಿದ್ದಾರೆ. ಸಾಫ್ಟ್‌ವೇರ್‌ ಎಂಜಿನಿಯರ್‌, ಪ್ರಾಧ್ಯಾಪಕರು, ಶಿಕ್ಷಕರು, ಉದ್ಯಮಿಗಳು ಹೆಚ್ಚು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಸೈಬರ್‌ ಕಳ್ಳರ ಬಲೆಗೆ ಬಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು, ಹೂಡಿಕೆ ಮಾಡಿದ ಹಣಕ್ಕಿಂತ ಶೇ 300 ರಷ್ಟು ಲಾಭ ಪಡೆಯಬಹುದು, ಮನೆಯಲ್ಲಿ ಇದ್ದುಕೊಂಡು ಆನ್‌ಲೈನ್‌ ಮುಖಾಂತರ ಕೆಲಸ ಮಾಡುತ್ತಾ ದಿನಕ್ಕೆ ಸಾವಿರಾರು ರೂಪಾಯಿ ದುಡಿಯಬಹುದು’ ಎಂದು ನಂಬಿಸಿ ಮೋಸ ಮಾಡುತ್ತಿದ್ದಾರೆ.

ADVERTISEMENT

‘ನಿಮ್ಮ ಹೆಸರಿನಲ್ಲಿ ಕೊರಿಯರ್‌ ಬಂದಿದೆ. ಅದನ್ನು ತಲುಪಿಸಲು ಹಣ ಪಾವತಿಸಿ’ ಎಂದು ಬ್ಯಾಂಕ್‌ ಖಾತೆಯ ವಿವರ ಪಡೆದು ಜನರ ಅರಿವಿಗೆ ಬರದಂತೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಈಚೆಗಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ‘ಪ್ರಜ್ಞಾವಂತ, ಬುದ್ಧಿವಂತ’ ಯುವಕರೇ ಹೆಚ್ಚಾಗಿ ಸೈಬರ್‌ ವಂಚನೆಗೆ ಒಳಗಾಗುತ್ತಿದ್ದಾರೆ.

ಎಲ್ಲ ಸೈಬರ್‌ ಅಪರಾಧಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸ್ಆ್ಯಪ್‌ ಮುಖಾಂತರ ಜನರನ್ನು ಪರಿಚಯಿಸಿಕೊಳ್ಳುತ್ತಾರೆ. ಜಾಹೀರಾತು ಮೂಲಕ ಆಕರ್ಷಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಹಣದ ಆಸೆ ಹುಟ್ಟಿಸಿ, ಅವರಿಂದ ದುಡ್ಡು ಕೀಳುತ್ತಿದ್ದಾರೆ.

ಇನ್ನೂ ಕೆಲವರು ಬ್ಯಾಂಕ್‌ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಎಟಿಎಂ ಅಪ್‌ಡೇಟ್‌, ಬ್ಯಾಂಕ್‌ ಖಾತೆಗೆ ಆಧಾರ್‌–ಪಾನ್‌ ಕಾರ್ಡ್‌ ಜೋಡಣೆ ಮಾಡಬೇಕು ಎಂದು ಖಾತೆಯ ವಿವರ, ಒಟಿಪಿ ಸಂಖ್ಯೆ ಪಡೆದು ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದರೂ ಜನರನ್ನು ಜಾಗೃತಗೊಳಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸೈಬರ್‌ ವಂಚನೆಯ ಕುರಿತು ಎಚ್ಚರಿಸುತ್ತಿಲ್ಲ. ಒಂದು ಕಡೆ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಅವುಗಳ ವಿಲೇವಾರಿ ವೇಗ ಪಡೆದುಕೊಳ್ಳುತ್ತಿಲ್ಲ. ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳ ಕಡತಗಳು ದೂಳು ಹಿಡಿಯುತ್ತಿವೆ. ವಿಲೇವಾರಿ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.

ಸಾರ್ವಜನಿಕರೇ ಎಚ್ಚರ!

ಸಾರ್ವಜನಿಕರು ಸೈಬರ್‌ ಅಪರಾಧಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಜಾಹೀರಾತನ್ನು ಆದಷ್ಟು ನಿರ್ಲಕ್ಷ್ಯ ಮಾಡಬೇಕು. ಪಾರ್ಟ್‌ಟೈಮ್‌ ಕೆಲಸ ಲಾಭ ಸೇರಿದಂತೆ ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ನಿರುದ್ಯೋಗಿಗಳನ್ನು ಟಾರ್ಗೆಟ್‌ ಮಾಡುವ ವಂಚಕರು ಮೊದಲಿಗೆ ಒಂದಷ್ಟು ಹಣದ ಆಸೆ ತೋರಿಸಿ ನಂತರ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ. ನಯವಾಗಿ ಮಾತನಾಡಿ ವಂಚಿಸುತ್ತಾರೆ. ಹಣ ಕಳೆದುಕೊಂಡ ಮೇಲೆ ಪರದಾಡುವುದಕ್ಕಿಂತ ಮೊದಲೇ ಜಾಗೃತರಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.