ADVERTISEMENT

ತುಮಕೂರು: ಸರ್ಕಾರದ ಭರವಸೆಯ ನಿರೀಕ್ಷೆಯಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು

ಈಡೇರುವುದೇ ನಿರೀಕ್ಷೆ

ಪೀರ್‌ ಪಾಶ, ಬೆಂಗಳೂರು
Published 11 ಡಿಸೆಂಬರ್ 2019, 9:36 IST
Last Updated 11 ಡಿಸೆಂಬರ್ 2019, 9:36 IST
ತುಮಕೂರು ಅಮಾನಿಕೆರೆ ಅಂಗಳದಲ್ಲಿ ನೆರೆದಿರುವ ಅಂಗನವಾಡಿ ಕಾರ್ಯಕರ್ತೆಯರು.
ತುಮಕೂರು ಅಮಾನಿಕೆರೆ ಅಂಗಳದಲ್ಲಿ ನೆರೆದಿರುವ ಅಂಗನವಾಡಿ ಕಾರ್ಯಕರ್ತೆಯರು.   

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಮಾಡಲು ರಾಜ್ಯದ ವಿವಿಧೆಡೆಯಿಂದ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ಭರವಸೆಯ ಮಾತಿಗಾಗಿ ಎದುರು ನೋಡುತ್ತಿದ್ದಾರೆ.

ಅವರ ಬೆಂಗಳೂರು ಚಲೋ ಪಾದಯಾತ್ರೆಗೆ ಪೊಲೀಸರ ಅನುಮತಿ ಸಿಕ್ಕಿಲ್ಲ. ಕಾರ್ಯಕರ್ತೆಯರ ಸಂಘದ ಮುಖಂಡರು ಮುಖ್ಯಮಂತ್ರಿಯನ್ನು ಮಂಗಳವಾರ ರಾತ್ರಿ ಭೇಟಿಯಾಗಿ ಚರ್ಚಿಸಿದರು.

‘ನಿಮ್ಮ ಒತ್ತಾಯಗಳು ಗಮನಕ್ಕೆ ಬಂದಿವೆ. ಡಿ.16 ರಂದು ಸರ್ಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಸಭೆ ಇದೆ. ನಿಮ್ಮ ಬೇಡಿಕೆಗಳ ಕುರಿತು ಚರ್ಚೆ ಮಾಡುತ್ತೇನೆ’ಎಂದು ಸಿ.ಎಂ. ಹೇಳಿದರು. ಕೊಟ್ಟ ಮನವಿ ಪತ್ರವನ್ನು ಓದಲಿಲ್ಲ. ಮುಖ್ಯ ಕಾರ್ಯದರ್ಶಿಗೆ ಕೊಟ್ಟರು ಎಂದು ಭೇಟಿಯ ನಿಯೋಗದಲ್ಲಿದ್ದ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಾವಿರಾರು ಕಾರ್ಯಕರ್ತೆಯರೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಪೊಲೀಸರು ಪಾದಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆಎಂದು ಹೇಳಿದೆವು. ನಮ್ಮ ಮಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೊತ್ತು ಎಂದಷ್ಟೆ ಪ್ರತಿಕ್ರಿಯೆ’ನೀಡಿದರು ಎಂದು ಸುನಂದಾ ನುಡಿದರು.

ಗದಗ ಜಿಲ್ಲೆ ರೋಣ ತಾಲ್ಲೂಕಿನ ಕಾರ್ಯಕರ್ತೆಯರು ಪ್ರೀತಿಯಿಂದ ಕೊಟ್ಟ ಜೋಳದ ರೊಟ್ಟಿಯನ್ನು ಸವಿಯುತ್ತಿರುವ ಹಾಸನದ ಬೇಲೂರಿನ ಕಾರ್ಯಕರ್ತೆಯರು.

ನಮ್ಮ ಕಷ್ಟ ಕೇಳಲು ತಯಾರಿಲ್ಲ

ಸುನಂದಾ

ಮನೆಮನೆಗೆ ಹೋಗಿ ವೋಟರ್ ಐಡಿ ಮಾಡಿಸುವ ಅಭಿಯಾನ ಮಾಡುವವರು ನಾವು. ಆ ವೋಟುಗಳಿಂದ ಗೆದ್ದವರು ನಮ್ಮ ಕಷ್ಟ ಕೇಳಲು ತಯಾರು ಇಲ್ಲ ಅಂದರೆ ನಮಗೆ ಬಹಳ ನೋವಾಗುತ್ತದೆ. ಹನ್ನೆರಡು ಸೀಟು ಗೆದ್ದೆವೆಂದು ಅವರು ಸಂತೋಷದಲ್ಲಿ ಇದ್ದಾರೆ. ಅವರ ಸಂತೋಷ ನಮ್ಮ ಕೊಡುಗೆ. ನಾವಿಲ್ಲಿ ಬಿಸಿಲಿನಲ್ಲಿ ಕಾಯುತ್ತಿದ್ದೇವೆ. ಕಷ್ಟ ಕೇಳಲು ಒಬ್ಬ ಮಹಾನುಭಾವನೂ ಬರಲಿಲ್ಲ ಎಂದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಸಿ.ಎಸ್.ದೇವಕಿಹೇಳಿದರು.

ಉಷಾ

ಮೂರು ಸಾವಿರ ಸಾಲಮಾಡಿಕೊಂಡು ಪ್ರತಿಭಟನೆಗೆ ಬಂದಿವಿ. ನಮ್ ತಾಲ್ಲೂಕಿನ್ಯಾಗ ಮೂರು ತಿಂಗಳಿನಿಂದ ನಮಗ ಪೇಮೆಂಟ್ ಆಗಿಲ್ಲ. ನಮ್ಮ ಕಷ್ಟ ಕಡಿಮಿ ಮಾಡೊ ಭರವಸೆಯನ್ನ ಸರ್ಕಾರ ಕೊಡುತ್ತೆ ಅಂತ ಕಾಯ್ತಾ ಇದ್ದಿವಿ. ಊರಿಂದ ತಂದ ರೊಟ್ಟಿ, ಚಪಾತಿ, ಶೇಂಗಾ ಹೋಳಿಗಿನೂ ಖಾಲಿಯಾದವು. ಊಟಕ್ಕೆ ಮುಂದೇನು ಮಾಡೋದೋ ಗೊತ್ತಿಲ್ಲ ಎಂದು ರೋಣ ತಾಲ್ಲೂಕು ಕೊತಬಾಳ ಗ್ರಾಮದ ಕಾರ್ಯಕರ್ತೆಉಷಾ ಅಸೂಟಿಕರ್ ನುಡಿದರು.

ಅಂಗನವಾಡಿ ಕಾರ್ಯಕರ್ತೆಯರ ಪಡಿಪಾಟಲು

ತುಮಕೂರು ಅಮಾನಿಕೆರೆಯ ಗಾಜಿನಮನೆಯಲ್ಲಿ ವಸ್ತು ಪ್ರದರ್ಶನದ ತಯಾರಿ ನಡೆಯುತ್ತಿದೆ. ಪ್ರವೇಶ ನಿಷೇಧಿಸಲಾಗಿದೆ. ಕಾರ್ಯಕರ್ತೆಯರು ಬಿಸಿಲ ಝಳ ತಡೆದುಕೊಳ್ಳಲು ಸೆರಗು ಮತ್ತು ಟವಲ್‌ಗಳನ್ನು ಅವಲಂಬಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಸಂಜೆ ೪ರ ಹೊತ್ತಿಗೆ ಬರುವ ಸಾಧ್ಯತೆ ಇದೆ’ ಎಂದು ಸಿಐಟಿಯು ಮುಖಂಡ ಮಹಮ್ಮದ್ ಮುಜೀಬ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.