ADVERTISEMENT

ಶಿರಾದಿಂದ ಬೈರೇನಹಳ್ಳಿವರೆಗೆ ಚರ್ತುಪಥ ರಸ್ತೆ ನಿರ್ಮಾಣಕ್ಕೆ‌ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 14:14 IST
Last Updated 6 ಜುಲೈ 2024, 14:14 IST

ಶಿರಾ: ರಾಷ್ಟ್ರೀಯ ಹೆದ್ದಾರಿ- 69ರಲ್ಲಿ ಶಿರಾದಿಂದ ಬೈರೇನಹಳ್ಳಿವರೆಗೆ ₹1ಸಾವಿರ ಕೋಟಿ ವೆಚ್ಚದಲ್ಲಿ 52 ಕಿಲೋಮೀಟರ್ ಚರ್ತುಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಅವರನ್ನು ನಾಲ್ಕೈದು ಬಾರಿ ಭೇಟಿ ಮಾಡಿ ಈ ಯೋಜನೆ ಬಗ್ಗೆ ಚರ್ಚಿಸಿ ಈ ಯೋಜನೆಗೆ ಅಗತ್ಯ ಹಣಕಾಸು ನೆರವು ಹಾಗೂ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಯೋಜನೆಗೆ ಟೆಂಡರ್ ಕರೆಯಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ನಿಗದಿತ ಸಮಯದಲ್ಲಿ ಯೋಜನೆ ಮುಕ್ತಾಯ ಮಾಡಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡ ನಂತರ ರಾಜಧಾನಿ ಬೆಂಗಳೂರು ಹಾಗೂ ಅಂತರ ರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಯಾಣಿಕರು ಹೋಗಿ ಬರಲು ಹಾಗೂ ಸರಕು ಸಾಗಾಣಿ ಮಾಡಲು ಅನುಕೂಲವಾಗುವುದು ಎಂದರು.

ADVERTISEMENT

ರೈಲ್ವೆ ಯೋಜನೆ: ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಯೋಜನೆ ತ್ವರಿತಗೊಳಿಸಿದ್ದು ಶಿರಾ ತಾಲ್ಲೂಕಿನ ಗಡಿಯ ಉಜ್ಜನಕುಂಟೆಯಿಂದ ತಿಮ್ಮರಾಜನಹಳ್ಳಿಯವರೆಗೆ ರೈಲ್ವೆ ಕಾಮಗಾರಿ ಕೈಗೊಳ್ಳಲು 642 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ನೀಡಿ ರೈಲ್ವೆ ಕಾಮಗಾರಿಗೆ ಬಿಟ್ಟುಕೊಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿರುವುದರಿಂದ ಕಾಮಗಾರಿ ತ್ವರಿತವಾಗಿ ಪ್ರಾರಂಭವಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.