ADVERTISEMENT

₹214 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:34 IST
Last Updated 8 ನವೆಂಬರ್ 2024, 14:34 IST
ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಗೃಹಸಚಿವ ಜಿ. ಪರಮೇಶ್ವರ ಅಧಿಕಾರಿಗಳಿಂದ ಇಲಾಖೆವಾರು ಮಾಹಿತಿ ಪಡೆದರು. ಜಿ.ಪ್ರಭು, ಶುಭಾ ಕಲ್ಯಾಣ್, ಕೆ.ವಿ.ಅಶೋಕ್ ಇದ್ದಾರೆ 
ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಗೃಹಸಚಿವ ಜಿ. ಪರಮೇಶ್ವರ ಅಧಿಕಾರಿಗಳಿಂದ ಇಲಾಖೆವಾರು ಮಾಹಿತಿ ಪಡೆದರು. ಜಿ.ಪ್ರಭು, ಶುಭಾ ಕಲ್ಯಾಣ್, ಕೆ.ವಿ.ಅಶೋಕ್ ಇದ್ದಾರೆ    

ಕೊರಟಗೆರೆ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 2014-25ನೇ ಸಾಲಿನಲ್ಲಿ ₹214 ಕೋಟಿ ವೆಚ್ಚದ 3,811 ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಗೃಹಸಚಿವ ಜಿ. ಪರಮೇಶ್ವರ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಹುತೇಕ ಈ ಕಾಮಗಾರಿಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಿಎಸ್ಆರ್ ಅನುದಾನದಲ್ಲಿ ₹27 ಕೋಟಿ ಕೊಠಡಿಗಳ ದುರಸ್ತಿ, ನೂತನ ಕಟ್ಟಡ ನಿರ್ಮಾಣದ ಜೊತೆಗೆ ಆಟದ ಮೈದಾನ, ಶೌಚಾಲಯ ನಿರ್ಮಾಣ ಆರೋಗ್ಯ ಕ್ಷೇತ್ರಗಳಿಗೆ ಬಳಸಲಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ನೂತನವಾಗಿ 48 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಅವುಗಳಲ್ಲಿ ಲಂಬಾಣಿ ತಾಂಡ, ಗೊಲ್ಲರಹಟ್ಟಿಗಳು ಒಳಗೊಂಡಿವೆ. ಈಗಾಗಲೇ 800 ಹಕ್ಕು ಪತ್ರಗಳನ್ನು ತಯಾರಿ ಮಾಡಿಕೊಂಡಿದ್ದು, ಸದ್ಯದಲ್ಲೇ ವಿತರಿಸಲಾಗುವುದು ಎಂದರು.

ನರೇಗಾ ಯೋಜನೆಯಡಿ ತಾಲ್ಲೂಕಿಗೆ 4,422 ಕಾಮಗಾರಿಗಳಿಗೆ ₹39 ಕೋಟಿ ಮುಂಜೂರು ಮಾಡಲಾಗಿದೆ. ₹20 ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ₹1,618 ಕಾಮಗಾರಿ ಪ್ರಗತಿಯಲ್ಲಿವೆ. 618 ಕಾಮಗಾರಿ ಪೂರ್ಣಗೊಂಡಿವೆ ಎಂದರು.

ತಾಲ್ಲೂಕಿನ ಹುಲಿಕುಂಟೆ ಬಳಿ ತೋಟಗಾರಿಕೆ ಇಲಾಖೆಯ ಜೇನುಕೃಷಿ ಕಟ್ಟಡ ಪಾಳು ಬಿದ್ದಿದ್ದು, ಅದನ್ನು ಶೀಘ್ರ ಅಭಿವೃದ್ಧಿಪಡಿಸಿ ಕಟ್ಟಡ ಸದುಪಯೋಗ ಪಡಿಸಿಕೊಳ್ಳುವಂತೆ ಇಲಾಖೆ ಅಧಿಕಾರಿಗೆ ಸೂಚಿಸಿದರು. ಹೊಳವನಹಳ್ಳಿ ಜನತಾ ಕಾಲೊನಿ ಬಳಿ ಪಾಳು ಬಿಟ್ಟಿರುವ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದು ವಿದ್ಯಾರ್ಥಿ ನಿಲಯಕ್ಕೆ ಬಳಸಿಕೊಳ್ಳಲು ತಿಳಿಸಿದರು. ಈಗಾಗಲೇ ಪಟ್ಟಣ ಪಂಚಾಯಿತಿಯಿಂದ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಎರಡು ವರ್ಷ ಕಳೆದಿದೆ. ಆದರೂ ಈವರೆಗೆ ಅವರಿಗೆ ನೀಡಿಲ್ಲ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಮುಂದಿನ ವಾರ ಪೌರಕಾರ್ಮಿಕರಿಗೆ ಮನೆ ಹಂಚಿಕೆ ಮಾಡುವಂತೆ ಹಾಗೂ ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೆಜೆಎಂ ಯೋಜನೆಯಡಿ ಕಾಮಗಾರಿ ಕಳಪೆ ಎಂಬ ಆರೋಪ ಕೇಳಿ ಬರುತ್ತಿದೆ. ನೀರಿನ ಕೊರತೆ ಇರುವೆಡೆಯಲ್ಲೂ ಕಾಮಗಾರಿ ಮಾಡಲಾಗಿದೆ. ಇದರಿಂದಾಗಿ ಯೋಜನೆಗೆ ಹಿನ್ನಡೆಯಾಗಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಎಸ್‌ಪಿ ಕೆ.ವಿ.ಅಶೋಕ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.