ADVERTISEMENT

ತೋವಿನಕೆರೆ | ಅಡಿಕೆ ತೋಟದ ಚೇಣಿಗೆ ಪೈಪೋಟಿ; ₹1,720ಕ್ಕೆ ಒಂದು ಅಡಿಕೆ ಮರ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 6:17 IST
Last Updated 5 ಜುಲೈ 2024, 6:17 IST
ಅಡಿಕೆ ತೋಟ
ಅಡಿಕೆ ತೋಟ   

ತೋವಿನಕೆರೆ (ತುಮಕೂರು): ಅಡಿಕೆ ತೋಟಗಳನ್ನು ಗುತ್ತಿಗೆ (ಚೇಣಿ) ಪಡೆದುಕೊಳ್ಳಲು ವ್ಯಾಪಾರಿಗಳ ನಡುವೆ ಪೈಪೋಟಿ ಕಂಡುಬಂದಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.

ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ವ್ಯಾಪಾರಸ್ಥರು ಅಡಿಕೆ ತೋಟವನ್ನು ರೈತರಿಂದ ಚೇಣಿಗೆ ಪಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಮೇ ತಿಂಗಳಲ್ಲೇ ಸಾಕಷ್ಟು ತೋಟಗಳನ್ನು ಚೇಣಿಗೆ ಪಡೆದುಕೊಂಡಿದ್ದಾರೆ. ಜೂನ್‌ನಲ್ಲಿ ಬಹುತೇಕ ತೋಟಗಳನ್ನು ಗುತ್ತಿಗೆಗೆ ಪಡೆದುಕೊಂಡಿದ್ದು, ಅಳಿದುಳಿದ ತೋಟವನ್ನು ಗುತ್ತಿಗೆಗೆ ಹಿಡಿಯಲು ಪೈಪೋಟಿ ಹೆಚ್ಚಾಗಿದೆ. ಈ ಬಾರಿ ದಾಖಲೆ ಮಟ್ಟದಲ್ಲಿ ಬೆಲೆ ಸಿಕ್ಕಿದೆ.

ಹಿಂದಿನ ವರ್ಷಗಳಲ್ಲಿ ತೋಟದಲ್ಲಿ ಇರುವ ಒಟ್ಟು ಮರಗಳನ್ನು ಲೆಕ್ಕಹಾಕಿ, ಒಂದು ಅಂದಾಜಿನ ಮೇಲೆ ಬೆಲೆ ನಿಗದಿಪಡಿಸಿ ಚೇಣಿಗೆ ಪಡೆದುಕೊಳ್ಳುತ್ತಿದ್ದರು. ಆರಂಭದಲ್ಲಿ ಮುಂಗಡ ಹಣ ನೀಡಿ ಚೇಣಿ ಖಚಿತಪಡಿಸಿಕೊಳ್ಳುತ್ತಿದ್ದರು. ಮರದಿಂದ ಕಾಯಿ ಕೀಳಿಸುವ ಸಮಯದಲ್ಲಿ ಉಳಿದ ಹಣ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಗಗನಮುಖಿಯಾಗಿದ್ದು, ಕ್ವಿಂಟಲ್ ₹50 ಸಾವಿರಕ್ಕಿಂತ ಹೆಚ್ಚಿದೆ. ಕಳೆದ ಎರಡುಮೂರು ವರ್ಷಗಳಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಇದರಿಂದಾಗಿ ಹೆಚ್ಚು ಬೆಲೆ ನಿಗದಿಪಡಿಸಿ ಗುತ್ತಿಗೆ ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ADVERTISEMENT

ತೋವಿನಕೆರೆ ಸಮೀಪದ ಹೊಲತಾಳ್ ಗ್ರಾಮದ ಗಂಗಾಧರ್ ಅವರ ಅಡಿಕೆ ತೋಟ ದಾಖಲೆ ಬೆಲೆಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಮರವನ್ನು ₹1,720 ಬೆಲೆಗೆ ಖರೀದಿಸಲಾಗಿದೆ. ಇವರ ತೋಟದಲ್ಲಿ 300 ಮರಗಳಿದ್ದು, ಸುಮಾರು ₹5 ಲಕ್ಷಕ್ಕೂ ಹೆಚ್ಚು ಹಣ ರೈತರಿಗೆ ಸಿಕ್ಕಿದಂತಾಗಿದೆ. ಇದು ಜಿಲ್ಲೆಯಲ್ಲಿ ಈವರೆಗೆ ಮಾರಾಟವಾದ ದಾಖಲೆ ಬೆಲೆ ಎಂಬ ಮಾತು ರೈತರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಅದೇ ರೀತಿ ಜೋನಿಗರಹಳ್ಳಿಯ ರೈತರೊಬ್ಬರಿಂದ ಒಂದು ಮರಕ್ಕೆ ₹1,520 ನಿಗದಿಪಡಿಸಿ ಚೇಣಿಗೆ ಪಡೆದುಕೊಳ್ಳಲಾಗಿದೆ. ತೋಟದಲ್ಲಿ ಸುಮಾರು 340 ಮರಗಳಿದ್ದು, ಸುಮಾರು ₹5 ಲಕ್ಷಕ್ಕೂ ಹೆಚ್ಚು ಲಾಭ ಬಂದಂತಾಗಿದೆ. ಹಿಂದಿನ ವರ್ಷಗಳಲ್ಲಿ ಒಂದು ಮರಕ್ಕೆ ಹೆಚ್ಚೆಂದರೆ ₹500–600ರ ವರೆಗೂ ಖರೀದಿಸುತ್ತಿದ್ದರು. ತುಂಬಾ ಇಳುವರಿ ಕೊಡುತ್ತಿದ್ದ ಮರಗಳಿಗೆ ಮಾತ್ರ ₹1 ಸಾವಿರದ ವರೆಗೂ ನೀಡುತ್ತಿದ್ದರು. ಆದರೆ ಈ ಬಾರಿ ಸಾಕಷ್ಟು ಕಡೆಗಳಲ್ಲಿ ಒಂದು ಮರಕ್ಕೆ ₹1 ಸಾವಿರಕ್ಕೂ ಹೆಚ್ಚು ಹಣ ನೀಡಿ ಚೇಣಿಗೆ ಪಡೆದುಕೊಂಡಿರುವುದು ಕಂಡುಬರುತ್ತದೆ ಎಂದು ರೈತರು ಹೇಳುತ್ತಾರೆ.

ಹೆಚ್ಚಿನ ಪ್ರಮಾಣದ ರೈತರು ತಾವೇ ಅಡಿಕೆ ಕೊಯ್ಲು ಮಾಡಿಸಿ ಮಾರಾಟ ಮಾಡುವುದು ಕಡಿಮೆ. ಮರದಿಂದ ಅಡಿಕೆ ಕಾಯಿ ಕೀಳಿಸಿ, ನಂತರ ಸಿಪ್ಪೆ ಸಿಲಿಸಿ, ಒಣಗಿಸಿ ಸಂಸ್ಕರಿಸಿ ಸಿದ್ಧಪಡಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಕಷ್ಟಕರ. ಇದಕ್ಕೆ ಸಾಕಷ್ಟು ಶ್ರಮ, ಕೆಲಸದವರ ಅಗತ್ಯವನ್ನು ಬೇಡುತ್ತದೆ. ಹಾಗಾಗಿ ತೋಟದಲ್ಲಿ ಇರುವ ಬೆಳೆಯ ಇಳುವರಿಯನ್ನು ಆಧರಿಸಿ ವ್ಯಾಪಾರಿಗಳಿಗೆ ಗುತ್ತಿಗೆ ನೀಡಿ ಕೈ ತೊಳೆದುಕೊಳ್ಳುತ್ತಾರೆ.

ಸಾಮಾನ್ಯವಾಗಿ ಆಗಸ್ಟ್– ಸೆಪ್ಟೆಂಬರ್ ವೇಳೆಗೆ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಅದಕ್ಕೂ ಒಂದೆರಡು ತಿಂಗಳು ಮೊದಲು ತೋಟವನ್ನು ಚೇಣಿಗೆ ಪಡೆದುಕೊಳ್ಳುತ್ತಾರೆ. ಮರದಲ್ಲಿ ಬಿಟ್ಟಿರುವ ಹೊಂಬಾಳೆ, ಕಟ್ಟಿರುವ ಕಾಯಿಗಳು ಹಾಗೂ ಇಳುವರಿಯ ಒಂದು ಅಂದಾಜಿನ ಲೆಕ್ಕಾಚಾರದ ಮೇಲೆ ವ್ಯಾಪಾರಿಗಳು, ಮಧ್ಯವರ್ತಿಗಳು ತೋಟ ಖರೀದಿಸುತ್ತಾರೆ. ಇದರಿಂದ ರೈತರಿಗೂ ಶ್ರಮ ಕಡಿಮೆ, ವ್ಯಾಪಾರಸ್ಥರಿಗೂ ಲಾಭವಾಗುತ್ತದೆ. ಹಾಗಾಗಿ ಬಹುತೇಕ ರೈತರು ಚೇಣಿಗೆ ನೀಡುತ್ತಾ ಬಂದಿದ್ದಾರೆ.

ಎಲ್ಲರ ಚಿತ್ತ ಅಡಿಕೆಯತ್ತ

ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇದು ದುಪ್ಪಟ್ಟಾಗಿದೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ. ರಾಗಿ ಬೆಳೆಯುವ ಪ್ರದೇಶದಲ್ಲೂ ಗಿಡ ನೆಡಲಾಗುತ್ತಿದೆ. ನೀರಾವರಿ ಸೌಲಭ್ಯ ಸಿಕ್ಕರೆ ಸಾಕು ಅಡಿಕೆ ಬೆಳೆಸಲಾಗುತ್ತಿದೆ ಎಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಭಾಗದ ವಿಜ್ಞಾನಿ ಪ್ರಶಾಂತ್ ಹೇಳುತ್ತಾರೆ. ದಿನದಿಂದ ದಿನಕ್ಕೆ ಅಡಿಕೆ ಬೆಲೆ ಹೆಚ್ಚುತ್ತಿರುವುದು ಮಾರುಕಟ್ಟೆ ಸೌಲಭ್ಯ ವ್ಯವಸಾಯ ಮಾಡಲು ಕಷ್ಟಪಡಬೇಕಿಲ್ಲ ಕೃಷಿ ಕಾರ್ಮಿಕರ ಅಗತ್ಯವಿಲ್ಲ ಎಂಬ ಕಾರಣಕ್ಕೆ ಅಡಿಕೆ ಬೆಳೆಯತ್ತ ರೈತರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.