ತುಮಕೂರು: ನಗರದ ಬಟವಾಡಿ ಬಳಿ ಕಳೆದ ಡಿ.29ರಂದು ಉದ್ಯಮಿ ಕೃಷ್ಣಮೂರ್ತಿ ಎಂಬುವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಘು, ತಾಲ್ಲೂಕಿನ ಬೆಳಧರದ ಬಳಿ 2015ರಲ್ಲಿ ನಡೆದ ಮಣಿ ಎಂಬುವರ ಕೊಲೆಯ ಆರೋಪಿ ಸುನೀಲ್‌ಕುಮಾರ್, ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರೌಡಿಶೀಟರ್ ಸುಜಯ್ ಭಾರ್ಗವ್‌ನ ಪತ್ನಿ ಸುಷ್ಮಾರಾಣಿ ಸೇರಿದಂತೆ ಒಟ್ಟು 12 ಜನ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕೊಲೆ ಯತ್ನದ ಆರೋಪಿ ಕೆ.ಎಸ್.ರಾಜೇಶ್ ಮತ್ತು ಕೃಷ್ಣಮೂರ್ತಿ ಇಬ್ಬರು ಸಂಬಂಧಿಕರಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದ ಲಾಭದ ವಿಷಯದಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಮನಸ್ತಾಪಕ್ಕೆ ಕಾರಣವಾಗಿತ್ತು. ಇದೇ ವಿಷಯಕ್ಕಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದೆ.
ಡಿ.29ರಂದು ಆರೋಪಿಗಳು ಎರಡು ಬೈಕ್‌ಗಳಲ್ಲಿ ಬಟವಾಡಿ ಹತ್ತಿರದ ಮಹಾಲಕ್ಷ್ಮಿ ನಗರದಲ್ಲಿರುವ ಕೃಷ್ಣಮೂರ್ತಿ ಅವರ ಮನೆಯ ಬಳಿ ಬಂದಿದ್ದರು. ಹಣದ ವಿಚಾರವಾಗಿ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪದಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಕುರಿತು ಹೊಸ ಬಡಾವಣೆ ಠಾಣೆಯಲ್ಲಿ ಕೃಷ್ಣಮೂರ್ತಿ ದೂರು ನೀಡಿದ್ದರು.
ಪ್ರಕರಣದ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಕೆ.ಎಸ್.ರಾಜೇಶ್, ವಿಜಯ್, ಗಿರೀಶ್, ನಂದನ್, ನಟರಾಜ, ಶಿವಣ್ಣ, ಹನುಮಂತರಾಯಪ್ಪ, ಮಂಜುನಾಥ್, ಸತೀಶ ಎಂಬುವರನ್ನು ಬಂಧಿಸಿದ್ದಾರೆ.
ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಜಿ.ಪುರುಷೋತ್ತಮ, ಸಿ.ಎಚ್.ರಾಮಕೃಷ್ಣಯ್ಯ, ವಿ.ಅವಿನಾಶ್, ಪಿಎಸ್‌ಐಗಳಾದ ಎಚ್.ಡಿ.ವಿದ್ಯಾಶ್ರೀ, ಸಂಜಯ್‌ಕುಮಾರ್ ಕಾಂಬ್ಳೆ, ಎಚ್.ಎನ್.ಮಹಾಲಕ್ಷ್ಮಿ, ಪ್ರಸನ್ನ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.