ತುಮಕೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ವಿಷಾದಿಸಿದರು.
ನಗರದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವಚನದ ಮೂಲಕ ವ್ಯಕ್ತಿತ್ವ ವಿಕಸನವಾಗುತ್ತದೆ. ಬಸವಣ್ಣನವರನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ನೋಡದೆ ಎಲ್ಲೆಡೆ ಅವರ ವಿಚಾರಗಳನ್ನು ತಿಳಿಸುವ ಕೆಲಸವಾಗಬೇಕು. ಕನ್ನಡ ಸಂಸ್ಕೃತಿ ಮತ್ತು ಬಸವಣ್ಣನವರ ತತ್ವಗಳ ಬಗ್ಗೆ ಯುವ ಸಮೂಹ ತಿಳಿದುಕೊಳ್ಳಬೇಕು. ಬಸವಣ್ಣನ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವರೊಬ್ಬ ಸಾಂಸ್ಕೃತಿಕ ನಾಯಕ ಎನ್ನುವುದು ಕೇವಲ ಔಪಚಾರಿಕ ಮಾತಾಗುತ್ತದೆ ಎಂದರು.
ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಸುಮಾ ಸತೀಶ್, ‘ಪೊಳ್ಳು ಭರವಸೆಯಲ್ಲಿ ಸಿಲುಕಿ ನರಳುತ್ತಿರುವ ಯುವ ಸಮೂಹಕ್ಕೆ ನೈಜತೆ ತಿಳಿಸಲು ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ. ಮುಂದಿನ ಪೀಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯದ ಆಸಕ್ತಿ ಮೂಡಿಸಲು ಅಕಾಡೆಮಿಯಿಂದ ನಾನಾ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
ಪತ್ರಕರ್ತ ರಂಜಾನ್ ದರ್ಗಾ, ‘ಮನುಸ್ಮೃತಿ ಸುಲಿಗೆಕೋರರ ಗ್ರಂಥ. ಮನು ಸಂಸ್ಕೃತಿ ನಮ್ಮನ್ನು ಸಮಾಜದಿಂದ ಹೊರ ಹಾಕುತ್ತದೆ. ಎಲ್ಲರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಸಮಾಜವನ್ನು ವಿಭಜಿಸುತ್ತದೆ. ಇದರ ವಿರುದ್ಧ ವಚನಕಾರರು ಚಳವಳಿ ಕಟ್ಟಿದರು. ಸಮಾಜ ಪರಿವರ್ತನೆಗೆ ಶ್ರಮಿಸಿದ್ದರು. ಬಸವಣ್ಣ ರಾಜನೀತಿ ತಜ್ಞ, ರಾಜಕೀಯ ತತ್ವಜ್ಞಾನಿಯಾಗಿದ್ದರು’ ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಲೇಖಕಿ ಬಾ.ಹ.ರಮಾಕುಮಾರಿ, ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಸಂಶೋಧಕ ಬಿ.ನಂಜುಂಡಸ್ವಾಮಿ ಇತರರು ಹಾಜರಿದ್ದರು.
ಯುವಕರಲ್ಲಿ ವಿಷ ಬಿತ್ತುವ ಕಾರ್ಯ
ಪ್ರಸ್ತುತ ಸಮಾಜದಲ್ಲಿ ಯುವಕರು ವಿದ್ಯಾರ್ಥಿಗಳಲ್ಲಿ ಮೂಲಭೂತವಾದ ಕೋಮುವಾದದ ಮೂಲಕ ವಿಷ ಬಿತ್ತಲಾಗುತ್ತಿದೆ. ಇದು ಅವರ ಬದುಕು ವ್ಯಕ್ತಿತ್ವ ಮನಸ್ಸು ಭಾವನೆ ಎಲ್ಲವನ್ನು ಹಾಳು ಮಾಡುತ್ತಿದೆ. ಇದೆಲ್ಲದಕ್ಕೆ ಬಸವಣ್ಣನವರ ವಿಚಾರಗಳು ಮದ್ದು ಚಿಕಿತ್ಸೆಯಾಗಿ ಕಾಣಿಸುತ್ತಿವೆ. ಎಂ.ಎಸ್.ಆಶಾದೇವಿ ವಿಮರ್ಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.