ADVERTISEMENT

ತುಮಕೂರು: ಹಾಸ್ಟೆಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

ನಗರದಲ್ಲಿ 2 ಲಕ್ಷ ವಿದ್ಯಾರ್ಥಿಗಳ ವಿದ್ಯಾಭ್ಯಾಸ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 4:34 IST
Last Updated 10 ಮಾರ್ಚ್ 2024, 4:34 IST
ತುಮಕೂರಿನ ಮೆಳೆಕೋಟೆಯಲ್ಲಿ ಶನಿವಾರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಶಂಕು ಸ್ಥಾಪನೆ ನೆರವೇರಿಸಿದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್ ಮೊದಲಾದವರು ಪಾಲ್ಗೊಂಡಿದ್ದರು
ತುಮಕೂರಿನ ಮೆಳೆಕೋಟೆಯಲ್ಲಿ ಶನಿವಾರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಶಂಕು ಸ್ಥಾಪನೆ ನೆರವೇರಿಸಿದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್ ಮೊದಲಾದವರು ಪಾಲ್ಗೊಂಡಿದ್ದರು   

ತುಮಕೂರು: ನಗರ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿದ್ದು, 2 ಲಕ್ಷ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ನಗರದ ಮೆಳೆಕೋಟೆಯಲ್ಲಿ ಶನಿವಾರ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ವಿದ್ಯಾರ್ಥಿ ನಿಲಯದ ಶಂಕು ಸ್ಥಾಪನೆ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿ ನಿಲಯಗಳ ಅವಶ್ಯಕತೆ ಇದೆ. ಹಾಲು ಒಕ್ಕೂಟ ಗ್ರಾಮೀಣ ಭಾಗದ ಮಕ್ಕಳಿಗಾಗಿ ಹಾಸ್ಟೆಲ್‌ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಒಕ್ಕೂಟವು ಪ್ರಾರಂಭದಿಂದಲೂ ಉತ್ತಮ ಆಡಳಿತ ನೀಡುತ್ತಾ ಬರುತ್ತಿದೆ. ರೈತ ಭವನ, ವಿದ್ಯಾರ್ಥಿ ನಿಲಯ ಕಟ್ಟಿಸುವ ಮೂಲಕ ಬೇರೆ ಒಕ್ಕೂಟಗಳಿಗಿಂತ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿದೆ ಎಂದರು.

ADVERTISEMENT

ತುಮಕೂರು ನಗರ ನಿರೀಕ್ಷೆಗೂ ಮೀರಿ ವೇಗವಾಗಿ ಬೆಳೆಯುತ್ತಿದೆ. ತುಮಕೂರಿನ ವರೆಗೆ ಮೆಟ್ರೊ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಬಡವರು, ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹಾಸ್ಟೆಲ್‌ ನಿರ್ಮಿಸುತ್ತಿರುವುದು ಒಳ್ಳೆಯ ಕಾರ್ಯ. ಸಹಕಾರ ಸಂಸ್ಥೆಗಳು ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.