ADVERTISEMENT

ತುಮಕೂರು: ನಾಗರಿಕರಿಗೆ ಬೈಸಿಕಲ್ ಮೇಯರ್ ಸ್ಥಾನ!

ಸ್ಮಾರ್ಟ್‌ಸಿಟಿಯಿಂದ ಗೌರವದ ಹುದ್ದೆ ಸೃಜನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:49 IST
Last Updated 17 ಸೆಪ್ಟೆಂಬರ್ 2020, 5:49 IST
ಬೈಸಿಕಲ್
ಬೈಸಿಕಲ್   

ತುಮಕೂರು: ತುಮಕೂರು ನಗರವನ್ನು ಸೈಕ್ಲಿಂಗ್ ನಗರವನ್ನಾಗಿಸಲು ಮುಂದಾಗಿರುವ ನಗರಪಾಲಿಕೆಯು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ‘ಬೈಸಿಕಲ್ ಮೇಯರ್’ ಎಂಬ ಗೌರವಾನ್ವಿತ ಸ್ಥಾನ ಸೃಜಿಸಿದೆ.

ನಗರವನ್ನು ನೆದರ್ಲೆಂಡ್ ರಾಜಧಾನಿ ಆಮ್‌ಸ್ಟ್ರಡಂ ಮಾದರಿಯಲ್ಲಿ ಸೈಕ್ಲಿಂಗ್ ನಗರವಾಗಿಸುವುದು ಇದರ ಉದ್ದೇಶ. ಆಮ್‌ಸ್ಟ್ರಡಂ ಸಾಮಾಜಿಕ ಉದ್ಯಮವಾದ ಬಿವೈಸಿಎಸ್ ಸಹಯೋಗದಲ್ಲಿ ಈ ಸ್ಥಾನ ಸೃಜಿಸಲಾಗಿದೆ. ನಗರದ ನಿವಾಸಿಗಳು ಈ ಸ್ಥಾನದ ಆಕಾಂಕ್ಷಿಯಾಗಲು ಸ್ಮಾರ್ಟ್ ಸಿಟಿ ಸಂಸ್ಥೆಯು ಅವಕಾಶ ಕಲ್ಪಿಸಿದೆ.

‘ಬೈಸಿಕಲ್ ಮೇಯರ್’ 4 ವರ್ಷಗಳ ಕಾಲಾವಧಿಯ ಗೌರವಸ್ಥಾನವಾಗಿದೆ. ಈ ಸ್ಥಾನಕ್ಕೆ ಆಯ್ಕೆಯಾದವರು ತುಮಕೂರನ್ನು ಸೈಕ್ಲಿಂಗ್ ನಗರವನ್ನಾಗಿಸುವ ನಿಟ್ಟಿನಲ್ಲಿ ನಾಗರಿಕರು, ಸಂಘ ಸಂಸ್ಥೆಗಳ ಜತೆ ನಿಕಟ ಸಂಬಂಧ ಹೊಂದಿರಬೇಕು. ಸೈಕ್ಲಿಂಗ್ ಮತ್ತು ಸುಸ್ಥಿರ ಚಲನಶೀಲತೆಯನ್ನು ಸಕಾರಾತ್ಮಕ ರೀತಿಯಲ್ಲಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕು.

ADVERTISEMENT

ನಗರವನ್ನು ‘ಬೈಸಿಕಲ್ ಸ್ನೇಹಿ ನಗರ’ವನ್ನಾಗಿಸುವ ಆಲೋಚನೆ, ಪ್ರಸ್ತಾಪಗಳನ್ನು ಒದಗಿಸುವ ಹಾಗೂ ಸೈಕ್ಲಿಂಗ್‍ನಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಎಲ್ಲಾ ವಯೋಮಾನದ ನಾಗರಿಕರನ್ನು ಸೈಕಲ್ ಉಪಯೋಗಿಸಲು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಸೈಕ್ಲಿಂಗ್ ಕುರಿತ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕು. ಸೈಕ್ಲಿಂಗ್ ಮತ್ತು ಚಲನಶೀಲತೆಯ ಕಾರ್ಯಕ್ರಮಗಳಲ್ಲಿ ಹಾಜರಾಗುವ ಮೂಲಕ ಸ್ವಂತ ಸೈಕ್ಲಿಂಗ್ ಕಥೆಯನ್ನು ಸಾಮಾಜಿಕ ಮಾಧ್ಯಮ ಹಾಗೂ ಸಂದರ್ಶನಗಳ ಮೂಲಕ ಹಂಚಿಕೊಂಡು ನಾಗರಿಕರನ್ನು ಸೈಕ್ಲಿಂಗ್‍ನತ್ತ ಸೆಳೆಯಬೇಕು.

ಆಸಕ್ತರು ಸೆ. 24ರೊಳಗೆ https://airtable.com/shrlZGMN7H549KAPo ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಸಂದರ್ಶನವನ್ನು ಒಳಗೊಂಡಿರುತ್ತದೆ.

ಈಗಾಗಲೇ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಬಹುದು. ‘ಬೈಸಿಕಲ್ ಮೇಯರ್’ ಒಬ್ಬ ವ್ಯಕ್ತಿಯ ಸ್ಥಾನವಾದ್ದರಿಂದ ಯಾವುದೇ ಸಂಸ್ಥೆ ಅಥವಾ ಉತ್ಪನ್ನದ ಮಾಲೀಕರು ಅಥವಾ ವಾಣಿಜ್ಯ ಉದ್ದೇಶವಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://bycs.org/ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.