ತುಮಕೂರು: ಅತಿಯಾದ ನಗರೀಕರಣವು ಕೃಷಿ ಭೂಮಿ ಮತ್ತು ಅರಣ್ಯದ ವ್ಯಾಪ್ತಿಯನ್ನು ಕುಗ್ಗಿಸುತ್ತಿದೆ. ಇದು ಜೀವ ವೈವಿಧ್ಯತೆಯ ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ಕಥೆಗಾರ, ವನ್ಯಜೀವಿ ಛಾಯಾಗ್ರಾಹಕ ಜಿ.ವಿ.ಆನಂದಮೂರ್ತಿ ಆತಂಕ ವ್ಯಕ್ತಪಡಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಯಲಚಿಗೆರೆ ಪ್ರೌಢಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಅಂಗವಾಗಿ ಆಯೋಜಿಸಿದ್ದ ಹಕ್ಕಿಗಳ ಛಾಯಾಚಿತ್ರ ಪ್ರದರ್ಶನ, ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳ ಪ್ರದರ್ಶನ ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವ ವೈವಿಧ್ಯತೆಯ ವಿನಾಶವು ಜಗತ್ತಿನ ಆರ್ಥಿಕ ಸ್ಥಿತಿಯನ್ನು ನಾಶ ಮಾಡುತ್ತದೆ. ಪರಿಸರದ ರಕ್ಷಣೆ ಎಂದರೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಯಾಗಿದೆ. ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯು ಭೂಮಿಯನ್ನು ಬಂಜೆಯನ್ನಾಗಿ ಮಾಡುತ್ತಿದೆ. ಜಲ ಮೂಲಗಳನ್ನು ರಕ್ಷಿಸದಿರುವುದರಿಂದ ಅರಣ್ಯ ಮತ್ತು ನೀರಿನ ಮೂಲಗಳು ನಶಿಸುತ್ತಿವೆ ಎಂದರು.
ಈ ಎಲ್ಲ ಬೆಳವಣಿಗೆಗಳಿಂದ ಜೀವ ವೈವಿಧ್ಯತೆ ಕುಗ್ಗುತ್ತಾ ನಮ್ಮ ಪರಿಸರ ಅಸಮತೋಲನಕ್ಕೆ ಈಡಾಗುತ್ತಿದೆ. ಎಂದೂ ಕಾಣದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಇವೆಲ್ಲವೂ ಜಗತ್ತಿನ ಜೀವ ವೈವಿಧ್ಯತೆಯನ್ನು ಕೊನೆಗಾಣಿಸುವ ಹಂತಕ್ಕೆ ತಲುಪಿವೆ. ನಮ್ಮ ಪರಿಸರದ ಅವಿಭಾಜ್ಯ ಅಂಗವಾದ ಪಕ್ಷಿ ಸಂಕುಲವೂ ರಕ್ಷಣೆಗಾಗಿ ಮೊರೆಯಿಡುತ್ತಿವೆ. ಹೀಗಾಗಿ ಪರಿಸರದ ಉಳಿವು ಪ್ರಜಾಪ್ರಭುತ್ವದ ಉಳಿವಾಗಿದೆ ಎಂದು ಅಭಿಪ್ರಾಯಪಟ್ಟರು.
ತುಮಕೂರು ವಿಜ್ಞಾನ ಕೇಂದ್ರದ ಟಿ.ಎಸ್.ನಿತ್ಯಾನಂದ ಪವಾಡ ರಹಸ್ಯ ಬಯಲು ಪ್ರದರ್ಶನ ನೀಡಿದರು. ಮುಖ್ಯೋಪಾಧ್ಯಾಯರಾದ ಎಚ್.ಯು.ಪದ್ಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತರಾಜು, ಸಂಪನ್ಮೂಲ ವ್ಯಕ್ತಿ ಬಿ.ವಿ.ತಿಮ್ಮರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.