ತುಮಕೂರು: ‘ಸರ್ಕಾರ, ಬಿಜೆಪಿ ವಿರುದ್ಧ ಬೇರೆಯವರು ಆರೋಪ ಮಾಡುತ್ತಿದ್ದರೂ ನಾವು ‘ಕೌಂಟರ್ ಅಟ್ಯಾಕ್’ (ಪ್ರತಿ ದಾಳಿ) ಮಾಡುತ್ತಿಲ್ಲ. ತೀವ್ರತರ ವಾಗ್ದಾಳಿ ನಡೆಸುತ್ತಿಲ್ಲ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಳಲು ತೋಡಿಕೊಂಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತಿಘಟ್ಟ ಗ್ರಾಮದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುವ ಸಮಯದಲ್ಲಿ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ನಮ್ಮ ವಿರುದ್ಧ ಮಾಡುತ್ತಿರುವ ಆರೋಪ, ಟೀಕೆಗಳಿಗೆ ಉತ್ತರ ಕೊಡದಿರುವುದನ್ನು ನೋಡಿದರೆ ಅವರು ಹೇಳಿದ್ದೇ ಸತ್ಯ ಎನ್ನುವಂತಾಗಿದೆ. ಮಾತನಾಡದೆ ಮೂಕಪ್ರೇಕ್ಷಕರಾಗಿರುವುದು ನಮ್ಮ ದೌರ್ಭಾಗ್ಯ. ಯಾರೋ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದನ್ನು ಕೇಳಿಸಿಕೊಂಡು ಹೌದು ಎನ್ನುತ್ತಿರುವುದನ್ನು ನೋಡಿದರೆ ನಾವೇ ಜಿಜ್ಞಾಸೆಗೆ ಒಳಗಾಗಿದ್ದೇವೆ. ವಾಪಸ್ ಕೇಳುತ್ತಿಲ್ಲ, ಮರು ಪ್ರಶ್ನೆ ಹಾಕುತ್ತಿಲ್ಲ. ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಳ್ಳಬೇಕಿದೆ’ ಎಂದರು.
‘ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ಮಾತನಾಡಿದ್ದೇನೆ. ಆರೋಪ, ಟೀಕೆಗಳಿಗೆ ಪ್ರತಿ ದಾಳಿ ಮಾಡುವಂತೆ ಹೇಳಿದ್ದೇನೆ. ಆ ಕೆಲಸ ಆಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.