ಕೊರಟಗೆರೆ: ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಸಜ್ಜನ ರಾಜಕಾರಣಿ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿದವರು. ಬಿಜೆಪಿ ಅಭ್ಯರ್ಥಿ ಸೋಮಣ್ಣ ಹೊರಗಿನವರು. ಸಂಸದ ಬಸವರಾಜು ಅವರು ಸಂಸತ್‌ನಲ್ಲಿ ಒಮ್ಮೆಯು ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಇತರ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಬಿಜೆಪಿಯು ಅಧಿಕಾರ ಕಳೆದುಕೊಂಡಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ತರತಮ ಧೋರಣೆ ತೋರುತ್ತಿದೆ. ಬರ ಪರಿಹಾರ, ಅನುದಾನ ಹಂಚಿಕೆ, ಯೋಜನೆ ನೀಡುವುದರಲ್ಲಿ ತಾರತಮ್ಯ ಕಂಡುಬಂದಿದೆ ಎಂದು ಹೇಳಿದರು.
ದೇಶದಲ್ಲಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎನ್ನುವುದನ್ನು ಕೇಂದ್ರ ಸರ್ಕಾರ ಮರೆತಿದೆ. ರಾಜ್ಯದಲ್ಲಿ ಬೀಕರ ಬರಗಾಲವಿದ್ದರೂ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಅನುದಾನ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು ಹೇಳಿದರು.
ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಅಜೆಂಡಾ ಇಟ್ಟುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಡುವ ಮಾತು ಗಮನಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನಿಸುತ್ತದೆ. ಒಂದು ದೇಶ, ಒಂದು ಚುನಾವಣೆಗೆ ಮುಂದಾಗಿದ್ದು ಸಂವಿಧಾನ ಬದಲಾಯಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.