ADVERTISEMENT

ಪಾವಗಡ: ಸುಧಾರಣೆಗೆ ಕಾದಿವೆ ಗಡಿಯ ಕನ್ನಡ ಶಾಲೆಗಳು

ನೂರಾರು ಕೋಟಿ ರೂಪಾಯಿ ಸಿಎಸ್‌ಆರ್ ಅನುದಾನವಿದ್ದರೂ ಅಭಿವೃದ್ಧಿ, ಸೌಕರ್ಯದಿಂದ ದೂರ

ಕೆ.ಆರ್.ಜಯಸಿಂಹ
Published 24 ಜೂನ್ 2024, 6:08 IST
Last Updated 24 ಜೂನ್ 2024, 6:08 IST
ಪಾವಗಡ ತಾಲ್ಲೂಕು ಉದ್ದಂಡಪ್ಪನ ಪಾಳ್ಯ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ
ಪಾವಗಡ ತಾಲ್ಲೂಕು ಉದ್ದಂಡಪ್ಪನ ಪಾಳ್ಯ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ   

ಪಾವಗಡ: ಆಂಧ್ರದ ಗಡಿ ಹಂಚಿಕೊಂಡಿರುವ ತಾಲ್ಲೂಕಿನ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಸಾಕಷ್ಟು ಸುಧಾರಿಸಬೇಕಿದೆ. ಶಿಥಿಲಗೊಂಡ ಕೊಠಡಿಗಳು, ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಬಗೆಹರಿಸುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

ಸೋಲಾರ್ ಪಾರ್ಕ್ ನಿರ್ಮಾಣವಾದ ನಂತರ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿರುವ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಕೊಠಡಿಗಳ ಸ್ಥಿತಿ ಬದಲಾಗಿಲ್ಲ. ಸೋಲಾರ್ ಕಂಪನಿಗಳಿಂದ ನೂರಾರು ಕೋಟಿ ಸಿಎಸ್‌ಆರ್‌ ನಿಧಿ ಸಂಗ್ರಹವಾಗಿದ್ದರೂ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಫಲರಾಗಿಲ್ಲ.

ನಾಗಲಮಡಿಕೆ ಹೋಬಳಿಯ ಬೆರಳೆಣಿಕೆ ಶಾಲಾ ಕೊಠಡಿಗಳ ನಿರ್ಮಾಣ, ಕೆಲ ಶಾಲೆಗಳಿಗೆ ಫ್ಯಾನ್, ಸೋಲಾರ್ ದೀಪ ನೀಡುವುದಕ್ಕಷ್ಟೇ ಈ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಇಡೀ ತಾಲ್ಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ADVERTISEMENT

ಮಳೆ ಬಂದರೆ ಶಾಲೆಗೆ ರಜೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ತಾಲ್ಲೂಕಿನ ಬಹುತೇಕ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಎದುರಿಸುತ್ತಿದ್ದಾರೆ.

ಶೌಚಾಲಯಗಳ ಕೊರತೆಯಿಂದ ವಿದ್ಯಾರ್ಥಿನಿಯರು ಬಯಲನ್ನು ಆಶ್ರಯಿಸಬೇಕಿದೆ. ಶುದ್ಧ ಕುಡಿಯುವ ನೀರಿನ ಸವಲತ್ತು ಇಲ್ಲದ ಕಾರಣ ಬಹುತೇಕ ಶಾಲೆಗಳಿಗೆ ಮನೆಗಳಿಂದ ಮಕ್ಕಳು ಕುಡಿಯುವ ನೀರು ತರುತ್ತಿದ್ದಾರೆ.

ಬಹುತೇಕ ಶಾಲೆಗಳಲ್ಲಿ ಆಟದ ಮೈದಾನ, ಕ್ರೀಡಾ ಸಾಮಗ್ರಿ, ಗ್ರಂಥಾಲಯ, ಕಂಪ್ಯೂಟರ್, ಡೆಸ್ಕ್‌ಗಳ ಅಭಾವವಿವಿದೆ. ಬೆರಳೆಣಿಕೆ ಶಾಲೆಗಳಿಗೆ ಮಾತ್ರ ಕ್ರೀಡಾ ಸಲಕರಣೆ ಪೂರೈಸಲಾಗಿದೆ. ಉಳಿದಂತೆ ಮೈದಾನ, ಸಲಕರಣೆಗಳ ಕೊರತೆಯಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ.

ರಂಗಸಮುದ್ರದ, ನಿಡಗಲ್ಲು, ಕ್ಯಾತಗಾನಹಳ್ಳಿಯ, ವದನಕಲ್ಲು, ವೈ.ಎನ್. ಹೊಸಕೋಟೆ, ಪೋತಗಾನಹಳ್ಳಿ, ದಳವಾಯಿಹಳ್ಳಿ, ರಾಜವಂತಿ ಶಾಲೆಯ ನಾಲ್ಕಕ್ಕೂ ಹೆಚ್ಚು ಕೊಠಡಿಗಳು, ವೆಂಕಟಾಪುರದ 8 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವಾಗ ಬೀಳುತ್ತದೆಯೊ ಎಂಬ ಆತಂಕದಲ್ಲಿ ಮಕ್ಕಳು, ಪೋಷಕರಿದ್ದಾರೆ. ಶಿಥಿಲಗೊಂಡಿರುವ ಗೋಡೆಗಳು, ಚಾವಣಿಯ ಹೆಂಚುಗಳು ಸದಾ ಬೀಳುತ್ತಿರುತ್ತವೆ. ಯಾವ ಸಮಯದಲ್ಲಿ ಯಾರ ಮೇಲೆ ಹೆಂಚುಗಳು, ಚಾವಣಿ ಬೀಳುತ್ತವೆಯೊ ಎಂಬ ಆತಂಕದಲ್ಲಿ ಮಕ್ಕಳು ಶಾಲಾ ಅವಧಿಯನ್ನು ಮುಗಿಸಬೇಕಿದೆ.

ತಾಲ್ಲೂಕಿನ 86 ಶಾಲೆಗಳ 163 ಕೊಠಡಿಗಳು ದುರಸ್ತಿ ಮಾಡಲಾಗದಷ್ಟು ಹಾಳಾಗಿವೆ. ಇವುಗಳನ್ನು ಶೀಘ್ರ ನೆಲಸಮಗೊಳಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ. ಸಾಕಷ್ಟು ಶಾಲೆಗಳ ಕೊಠಡಿಗಳು ಸುಣ್ಣ- ಬಣ್ಣ ಕಂಡು ದಶಕಗಳು ಕಳೆದಿವೆ.

ತಾಲ್ಲೂಕಿನ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ 13,980 ಮಂದಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕೇವಲ 1,232 ಕೊಠಡಿಗಳು ಲಭ್ಯವಿದೆ. ಅವುಗಳಲ್ಲಿ 729 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. 360 ಕೊಠಡಿಗಳನ್ನು ದುರಸ್ತಿ ಮಾಡಬೇಕಿದೆ. ಮಕ್ಕಳ ಸಂಖ್ಯೆಗನುಗುಣವಾಗಿ 130ಕ್ಕೂ ಹೆಚ್ಚಿನ ಕೊಠಡಿಗಳ ಅಗತ್ಯವಿದೆ.

ಆವರಣ ಗೋಡೆ ಇಲ್ಲದೆ ಬಹುತೇಕ ಶಾಲೆಗಳ ಕೊಠಡಿಗಳನ್ನು ರಾತ್ರಿ ವೇಳೆ ಕಾನೂನು ಬಾಹಿರ ಚಟುವಟಿಕಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಸುಮಾರು 152 ಶಾಲೆಗಳಿಗೆ ಮೈದಾನದ ಅಗತ್ಯವಿದೆ. 122 ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸವಲತ್ತು, 60ಕ್ಕೂ ಹೆಚ್ಚಿನ ಶಾಲೆಗಳಿಗೆ ಶೌಚಾಲಯದ ಅಗತ್ಯವಿದೆ.

ಅಂಕಿ ಅಂಶ

l ನೆಲಸಮಗೊಳಿಸಬೇಕಿರುವ ಶಾಲಾ ಕೊಠಡಿಗಳು- 163

l ದುರಸ್ತಿಯಾಗಬೇಕಿರುವ ಕೊಠಡಿಗಳು- 360

l ಸುಣ್ಣ ಬಣ್ಣ ಅಗತ್ಯವಿರುವ ಕೊಠಡಿಗಳು -287

l ಅಗತ್ಯವಿರುವ ಶೌಚಾಲಯ - 65

l ಕುಡಿಯುವ ನೀರಿನ ಸೌಲಭ್ಯ ಇಲ್ಲದ ಶಾಲೆ-122

ಪಾವಗಡ ತಾಲ್ಲೂಕು ಉದ್ದಂಡಪ್ಪನ ಪಾಳ್ಯ ಶಿಥಿಲ ಶಾಲೆಯಲ್ಲಿ ಮಕ್ಕಳ ಕಲಿಕೆ

ತಾಲ್ಲೂಕಿನ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಆದ್ಯತೆ ನೀಡಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ಕೊಠಡಿಗಳನ್ನು ಶೀಘ್ರ ನೆಲಸಮಗೊಳಿಸಿ ಅನಾಹುತ ತಪ್ಪಿಸಬೇಕು.

- ಕುಮಾರ್ ಕೆ ಟಿ ಹಳ್ಳಿ

ಶಿಕ್ಷಕರ ಕೊರತೆಯಿಂದ ತಾಲ್ಲೂಕಿನ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಅಗತ್ಯವಿರುವ ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಬೇಕಿದೆ.

-ರಾಜು ಪಾವಗಡ

ಸೋಲಾರ್ ಪಾರ್ಕ್‌ನಿಂದ ಸಂಗ್ರಹವಾಗಿರುವ ಸಿಎಸ್‌ಆರ್ ಅನುದಾನವನ್ನು ತಾಲ್ಲೂಕಿನ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ವಿನಿಯೋಗಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು. ಕನ್ನಡ ಶಾಲೆಗಳ ಉಳಿವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ.

-ರವಿಪ್ರಸಾದ್ ಪಾವಗಡ

ಪಟ್ಟಿ ಸಲ್ಲಿಕೆ ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ಪಟ್ಟಿ ಮಾಡಿ ಈಗಾಗಲೇ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಪ್ರತಿ ಶಾಲೆಗೆ ಹೋಗಿ ಸ್ಥಳ ಪರಿಶೀಲಿಸಿ ಮುಖ್ಯಶಿಕ್ಷಕರಿಂದ ಮಾಹಿತಿ ಪಡೆಯಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಆದೇಶದಂತೆ ಸಂಪೂರ್ಣವಾಗಿ ಶಿಥಿಲವಾಗಿರುವ ಕೊಠಡಿಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ನೆಲಸಮಗೊಳಿಸಲಿದ್ದಾರೆ. ಅನುದಾನ ಬಿಡುಗಡೆಗೊಂಡ ಕೂಡಲೇ ನೂತನ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. -ಇಂದ್ರಾಣಮ್ಮ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.