ADVERTISEMENT

ಸಮಯಕ್ಕೆ ಬಾರದ ಡಿ.ಸಿ: ಸಭೆ ಬಹಿಷ್ಕರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:46 IST
Last Updated 18 ಜುಲೈ 2024, 14:46 IST
ವಸಂತ ನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ರೈತರು ಪ್ರತಿಭಟನೆ ನಡೆಸಿದರು
ವಸಂತ ನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ರೈತರು ಪ್ರತಿಭಟನೆ ನಡೆಸಿದರು   

ಕೋರ: ರೈತರೊಂದಿಗಿನ ಸಮಾಲೋಚನಾ ಸಭೆಗೆ ಎರಡು ತಾಸು ತಡವಾಗಿ ಬಂದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಅವರ ನಡೆಯನ್ನು ಖಂಡಿಸಿ ಶಿರಾ ತಾಲ್ಲೂಕು, ತುಮಕೂರು ತಾಲ್ಲೂಕಿನ ರೈತರು ಪ್ರತಿಭಟನೆ ನಡೆಸಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ಭೂ ಸ್ವಾಧೀನಕ್ಕೆ ಒಳಪಡುವ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹುಂಜನಾಳು, ತುಮಕೂರು ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ, ಚಿಕ್ಕಸೀಬಿ ಗ್ರಾಮಗಳ ರೈತರ ಸಮಾಲೋಚನೆ ಸಭೆ ಗುರುವಾರ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ ಜಿಲ್ಲಾಧಿಕಾರಿ ಮಾಧ್ಯಾಹ್ನ 1 ಗಂಟೆಗೆ ಬಂದಿದ್ದರಿಂದ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಕೆಐಎಡಿಬಿ ಅಧಿಕಾರಿಗಳೇ ಪ್ರತಿಯೊಬ್ಬ ಖಾತೆದಾರ ರೈತನಿಗೂ ನೋಟಿಸ್‌ ಮೂಲಕ ಮಾಹಿತಿ ನೀಡಿ ಸಭೆ ನಿಗದಿ ಪಡಿಸಿದ್ದರು. ಬುಧವಾರ ರೈತರು ಒಂದೆಡೆ ಸೇರಿ ಪೂರ್ವಭಾವಿ ಸಭೆ ನಡೆಸಿ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಜಿಲ್ಲಾ ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿಯಿಲ್ಲ ಎಂದು ದೂರಿದರು.

ADVERTISEMENT

5 ಮತ್ತು 6ನೇ ಹಂತಕ್ಕೆ ಭೂ ಸ್ವಾಧೀನಗೊಳ್ಳುವ ರೈತರೊಂದಿಗೆ ಗುರುವಾರ ಸಮಾಲೋಚನಾ ಸಭೆ ನಡೆಯಬೇಕಿತ್ತು. ಆದರೆ ರೈತರು ಪ್ರತಿಭಟಿಸಿ ಸಭೆ ಬಹಿಷ್ಕರಿಸಿದ್ದರಿಂದ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಿಂತಿರುಗಿದರು.

‘ಸರ್ಕಾರ ನಿಗದಿ ಪಡಿಸುವ ದರಕ್ಕೆ ಭೂಮಿ ನೀಡಲು ಸಾಧ್ಯವಿಲ್ಲ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಭೂ ಪರಿಹಾರ ನೀಡಬೇಕು. ಪರ್ಯಾಯ ಭೂಮಿ ನೀಡಬೇಕು’ ಎನ್ನುವುದು ರೈತರ ವಾದ.

‘ಈಗಾಗಲೇ ₹1 ಕೋಟಿಯಿಂದ ₹1.50 ಕೋಟಿವರೆಗೆ ಈ ಭಾಗದ ಭೂಮಿಗೆ ಬೆಲೆಯಿದೆ. ಆದರೆ ಸರ್ಕಾರ ₹20 ಲಕ್ಷ ಪರಿಹಾರ ನೀಡಿ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಶಿರಾ ತಾಲ್ಲೂಕು ಶಾಶ್ವತ ಬರಪೀಡಿತ ತಾಲ್ಲೂಕು ಎಂದು ನೆಪ ಹೇಳುವುದು ಸರಿಯಲ್ಲ. ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮವನ್ನು ಗಡಿ ಗ್ರಾಮ ಅರಣ್ಯಕ್ಕೆ ಸಮೀಪವಿದೆ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸಾಬೂಬು ನೀಡುವುದನ್ನು ಸರ್ಕಾರ, ಜಿಲ್ಲಾಡಳಿತ ಮೊದಲು ನಿಲ್ಲಿಸಲಿ’ ಎಂದು ರೈತರು ಕಿಡಿಕಾರಿದರು.

ಸಭೆ 11 ಗಂಟೆಗೆ ನಿಗದಿಯಾಗಿದ್ದರೂ ಯಾವ ಅಧಿಕಾರಿಗಳು ಹಾಜರಿರಲಿಲ್ಲ. ಜಿಲ್ಲಾಧಿಕಾರಿಯೊಂದಿಗೆ ತುಮಕೂರು ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಬಂದರು. ಇದಕ್ಕೂ ಮುನ್ನ ಈ ಅಧಿಕಾರಿಗಳು ಎಲ್ಲಿಗೆ ಹೋಗಿದ್ದರು ಎಂದು ರೈತರು ಪ್ರಶ್ನಿಸಿದರು.

ರೈತರಾದ ಪರಮೇಶ್ವರಯ್ಯ, ನಾಗರಾಜು, ಕಾಮರಾಜು, ಮುದಿಮಡು ರಂಗಶಾಮಯ್ಯ, ವೀರಾಚಾರ್‌, ಶಂಕರ್‌, ಉಮೇಶ್‌, ರಮೇಶ್‌ಗೌಡ, ನಾಟರಾಜು ಸೇರಿದಂತೆ ನೂರಾರು ರೈತರು ಹಾಜರಿದ್ದರು.

ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿವಸಂತನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿವಸಂತನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿವಸಂತನರಸಾಪುರ ಕೈಗಾರಿಕಾ ಪ್ರದೇಶದ 5 ಮತ್ತು 6ನೇ ಹಂತದ ರೈತರು ಪ್ರತಿಭಟನೆ ನಡೆಸಿದರು.

Quote - ಅಧಿಕಾರಿಗಳು ನಿಗದಿಯಾದ ಸಮಯಕ್ಕೆ ಸರಿಯಾಗಿ ಸಭೆ ನಡೆಸಬೇಕು. ಪರ್ಯಾಯ ಭೂಮಿ ನೀಡಬೇಕು ಇಲ್ಲವೇ ಮಾರುಕಟ್ಟೆ ದರದಂತೆ ಭೂ ಪರಿಹಾರ ನೀಡಿದರೆ ಮಾತ್ರ ಭೂಮಿ ಬಿಟ್ಟುಕೊಡಲು ಒಪ್ಪಿಕೊಳ್ಳುತ್ತೇವೆ. ಎಚ್.ಎನ್. ರಾಜಣ್ಣ ರೈತ ಹುಂಜಿನಾಳ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.