ಕೊಡಿಗೇನಹಳ್ಳಿ: ಜಯಮಂಗಲಿ ನದಿ ತೀರದ ಇಮ್ಮಡಗೊಂಡನಹಳ್ಳಿ ಹಾಗೂ ಸುತ್ತಲಿನ ಹಲವು ಗ್ರಾಮಗಳ ಜನರಿಗೆ ಮಳೆಗಾಲ ಬಂತೆಂದರೆ ಆತಂಕ ಶುರುವಾಗುತ್ತದೆ. ಒಂದಡೆ ರಸ್ತೆ ಹಾಳಾಗಿ ಗುಂಡಿ ಬಿದ್ದಿದ್ದರೆ, ಮತ್ತೊಂದೆಡೆ ಆಗಾಗ ಹರಿಯುವ ನದಿಯಿಂದ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ರೋಗಿಗಳು ಸಂಚಾರಕ್ಕೂ ಅಡ್ಡಿಯಾಗುತ್ತದೆ
ಪುರವರ ಹೋಬಳಿ ಆಡಳಿತಾತ್ಮಕವಾಗಿ ಮಧುಗಿರಿ ತಾಲ್ಲೂಕಿನಲ್ಲಿದ್ದರೂ, ರಾಜಕೀಯವಾಗಿ ಕೊರಟಗೆರೆ ಕ್ಷೇತ್ರಕ್ಕೆ ಸೇರುವುದರಿಂದ ಅಭಿವೃದ್ಧಿಯಲ್ಲಿ ಹಿಂದೆಬಿದ್ದಿದೆ.
2022ರಲ್ಲಿ ಕೊರಟಗೆರೆ ಹಾಗೂ ಮಧುಗಿರಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಜಯಮಂಗಲಿ ನದಿ ತುಂಬಿತ್ತು. ಬಿಜವರ ಹಾಗೂ ಕೋಡ್ಲಾಪುರ ಕೆರೆ ಕೋಡಿ ನೀರು ಕೋಡ್ಲಾಪುರ-ಇಮ್ಮಡಗೊಂಡನಹಳ್ಳಿ ರಸ್ತೆ ತುಂಬಿ ಹರಿಯಿತು. ಇಮ್ಮಡಗೊಂಡನಹಳ್ಳಿ ದ್ವೀಪದಂತಾಗಿತ್ತು. ಇದರಿಂದ ಇಮ್ಮಡಗೊಂಡನಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳ ಜನರ ಸಂಚಾರ ಸಾಧ್ಯವಾಗದೆ ಒಂದಷ್ಟು ದಿನಗಳು ಗ್ರಾಮದಲ್ಲೇ ಬಂಧಿಯಾಗಿದ್ದರು.
ಆಗ ಜಿ.ಪರಮೇಶ್ವರ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮುಂದಿನ ಬೇಸಿಗೆಯಷ್ಟರಲ್ಲಿ ಜಯಮಂಗಲಿ ನದಿಗೆ ಸೇತುವೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಎರಡು ವರ್ಷ ಕಳೆದರೂ ಕಾಮಗಾರಿ ಮಂಜೂರು ಆಗಿದೆಯೊ, ಇಲ್ಲವೊ ಎನ್ನುವುದು ಖಚಿತವಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕೇಳಿದರೆ ಮಂಜೂರಾಗಿದೆ. ಆದರೆ ಭೂಮಿಪೂಜೆ ಮಾಡಬೇಕು ಎನ್ನುತ್ತಿದ್ದಾರೆ.
ಇಮ್ಮಡಗೊಂಡನಹಳ್ಳಿ, ಗೋವಿಂದನಹಳ್ಳಿ, ವೀರನಾಗೇನಹಳ್ಳಿ, ಕೋಡ್ಲಾಪುರ, ರಾಮನಹಳ್ಳಿ ಜನರಲ್ಲದೇ ಬಡಕನಹಳ್ಳಿ, ಗಿರೇಗೌಡನಹಳ್ಳಿ ಜನರು ಪುರವರ, ಕೊಡಿಗೇನಹಳ್ಳಿ ಹಾಗೂ ಐಡಿಹಳ್ಳಿ ಕಡೆ ತೆರಳಲು ಮಳೆಗಾಲದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ನದಿ ಜೋರಾಗಿ ಹರಿಯುವ ಸೂಚನೆ ಇರುವುದರಿಂದ ಅನಾಹುತಗಳ ಸಂಭವಿಸುವ ಮೊದಲೇ ಸೇತುವೆ ನಿರ್ಮಿಸಿ ಎಂದು ಇಮ್ಮಡಗೊಂಡನಹಳ್ಳಿ ಗ್ರಾಮದ ರಂಗನಾಥಗೌಡ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.