ತುಮಕೂರು: ಕೈಗಾರಿಕೆಗಳಿಗೆ ವಿದ್ಯುತ್ ನೀಡದೆ ‘ಕತ್ತಲೆ ಭಾಗ್ಯ’ ಕರುಣಿಸಿದ್ದಾರೆ. ಇದರಿಂದಾಗಿ ಕೈಗಾರಿಕೆಗಳು ಬಾಗಿಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಕೈಗಾರಿಕೋದ್ಯಮಿಗಳ ಜತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿಗಳ ಸಮಸ್ಯೆ ಆಲಿಸಿದ ನಂತರ ಮಾತನಾಡಿದರು.
ಉಚಿತ ಕೊಡುಗೆ ನೀಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಜನರಿಗೆ ಉಚಿತವಾಗಿ ವಿದ್ಯುತ್ ಕೊಟ್ಟು, ಕೈಗಾರಿಕೆಗಳಿಗೆ ನೀಡದೆ ಉದ್ಯಮಗಳು ಮುಚ್ಚುವಂತೆ ಮಾಡಿದ್ದಾರೆ. ಇದರ ನಡುವೆ ವಿದ್ಯುತ್ ಶುಲ್ಕವನ್ನು ಶೇ 20ರಷ್ಟು ಹೆಚ್ಚಳ ಮಾಡಿ ಮತ್ತಷ್ಟು ಹೊರೆ ಹಾಕಿದ್ದಾರೆ. ಉದ್ಯಮಿಗಳ ಸಂಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಉದ್ಯಮಿಗಳ ಸಂಕಷ್ಟ ಕೇಳುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರ ಸತ್ತ ಸ್ಥಿತಿಗೆ ತಲುಪಿದೆ ಎಂದು ದೂರಿದರು.
ಉದ್ಯಮಿಗಳಾದ ಎಚ್.ಜಿ.ಚಂದ್ರಶೇಂಕರ್, ಟಿ.ಜಿ.ಗಿರೀಶ್, ಸುಜ್ಞಾನ ಹಿರೇಮಠ್, ರಾಜಗೋಪಾಲ್, ರಮೇಶ್ ಬಾಬು ಮೊದಲಾದವರು ಜಿಲ್ಲೆಯಲ್ಲಿ ಕೈಗಾರಿಗಳು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ ಸಲ್ಲಿಸಿದ ಬೇಡಿಕೆ
* ಲೋಡ್ ಶೆಡ್ಡಿಂಗ್ ನಿಲ್ಲಿಸಿ, ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು.
* ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳ ಆಸ್ತಿಯನ್ನು ಎಐಎಡಿಬಿಯಿಂದ ಪಾಲಿಕೆಗೆ ವರ್ಗಾವಣೆ ಮಾಡಿಕೊಂಡ ನಂತರ ದುಬಾರಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ಆಸ್ತಿ ತೆರಿಗೆಯನ್ನು ಈ ಕೈಗಾರಿಕೆಗಳಿಗೂ ವಿಧಿಸಬೇಕು.
* ಕೆಐಎಡಿಬಿ ನೀಡುವ ಭೂಮಿಗೆ ಅಂತಿಮ ದರ ನಿರ್ಧಾರ ಮಾಡುವಾಗ ಅಲಾಟ್ ಮೆಂಟ್ ದರಕ್ಕಿಂತ ಶೇ 20ರಷ್ಟು ಮೀರದಂತೆ ನೋಡಿಕೊಳ್ಳಬೇಕು.
* ಕಾರ್ಮಿಕರ ಕನಿಷ್ಠ ವೇತನವನ್ನು ₹21 ಸಾವಿರದಿಂದ ₹31 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳಿಗೆ ಮತ್ತಷ್ಟು ಹೊಡೆತ ಬೀಳುತ್ತದೆ. ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬರುತ್ತವೆ. ಹಾಗಾಗಿ ಈ ಹಿಂದೆ ಇದ್ದ ವೇತನ ಮುಂದುವರಿಸಬೇಕು.
* ವಿದ್ಯುತ್ ಯೂನಿಟ್ ದರ, ಮಾಸಿಕ ನಿಗದಿತ ಶುಲ್ಕ ಏರಿಸಲಾಗಿದೆ. ಎಚ್‌ಟಿ ಹಾಗೂ ಎಲ್‌ಟಿ ದರಗಳನ್ನು ಅವೈಜ್ಞಾನಿಕವಾಗಿ, ಏಕಪಕ್ಷೀಯವಾಗಿ ಹೆಚ್ಚಿಸಲಾಗಿದ್ದು, ಜನಸಾಮಾನ್ಯರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಹೊರೆಯಾಗಿದೆ.
* ಬೇರೆ ರಾಜ್ಯಗಳಿಗೆ ಹೊಲಿಸಿದರೆ ನಮ್ಮಲ್ಲಿ ಅತಿಹೆಚ್ಚು ವಿದ್ಯುತ್ ದರ ವಿಧಿಸಲಾಗುತ್ತಿದೆ. ಇದರಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿ, ಉತ್ಪಾದನೆ ಕಡಿಮೆಯಾಗಲಿದೆ. ಜತೆಗೆ ಬೇರೆ ರಾಜ್ಯಗಳ ಉತ್ಪನ್ನಗಳ ಬೆಲೆ ಕಡಿಮೆಯಾಗುವುದರಿಂದ ನಮ್ಮ ಸರಕು ಮಾರಾಟ ಕಷ್ಟಕರವಾಗುತ್ತದೆ. ರಾಜ್ಯದ ಉದ್ಯಮಗಳು ನಷ್ಟ ಅನುಭವಿಸುತ್ತವೆ.
* ಕೈಗಾರಿಕಾ ಪ್ರದೇಶಗಳಲ್ಲಿ ಭೂಗತ ಕೇಬಲ್ ಅಳವಡಿಕೆ ಶೀಘ್ರ ಪೂರ್ಣಗೊಳಿಸಬೇಕು.
* ಡಿಮಾಂಡ್ ಶುಲ್ಕವನ್ನು 1 ಕೆ.ವಿಗೆ ₹265ರಿಂದ ₹350ಕ್ಕೆ ಏರಿಸಿದ್ದು, ತೊಂದರೆಯಾಗುತ್ತಿದೆ. ಈ ಹಿಂದೆ ಇದ್ದ ದರ ಮುಂದುವರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.