ADVERTISEMENT

ಮತ್ತೆ ಪ್ರಾರಂಭವಾಗುವುದೇ ಕೃಷಿ ಉತ್ಪನ್ನ ಮಾರುಕಟ್ಟೆ

ವಿಲೀನವಾಗಿದ್ದ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 7:08 IST
Last Updated 14 ಫೆಬ್ರುವರಿ 2024, 7:08 IST
ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಬಳಿ ಸ್ಥಗಿತವಾಗಿರುವ ಮಾರುಕಟ್ಟೆ
ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಬಳಿ ಸ್ಥಗಿತವಾಗಿರುವ ಮಾರುಕಟ್ಟೆ   

ಕೊರಟಗೆರೆ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಪ್ರಾರಂಭಕ್ಕೂ ಮುನ್ನವೇ ಈ ಹಿಂದಿನ ಬಿಜೆಪಿ ಸರ್ಕಾರ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಲೀನ ಮಾಡುವ ಮೂಲಕ ಮುಚ್ಚಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಮುಂಬರುವ ಬಜೆಟ್‌ನಲ್ಲಿ ಮತ್ತೆ ಕೊರಟಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಿಸಬಹುದೆನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ತಾಲ್ಲೂಕು ಸೇರಿದಂತೆ ಅಕ್ಕಪಕ್ಕದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2017ರಲ್ಲಿ ಅಂದಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ ಅವರು ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪ್ರತ್ಯೇಕಿಸಿ ಕೊರಟಗೆರೆಗೆ ಸ್ವತಂತ್ರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮುಂಜೂರು ಮಾಡುವಲ್ಲಿ ಹೆಚ್ಚಿನ ಪರಿಶ್ರಮ ಹಾಕಿದ್ದರು.

ಅದರಂತೆ ಫೆಬ್ರುವರಿ 2017ರಲ್ಲಿ ಆಗಿನ ಸರ್ಕಾರ ಅಧಿಸೂಚನೆ ಹೊರಡಿಸಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಪ್ರತ್ಯೇಕಿಸಿ ಕೊರಟಗೆರೆಗೆ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಕ್ಕೆ ಸೂಚಿಸಲಾಯಿತು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹುಲಿಕುಂಟೆ ಗ್ರಾಮದ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಡಿಗಲ್ಲು ಹಾಕಲಾಯಿತು. ಇದರ ವ್ಯಾಪ್ತಿಯಲ್ಲಿ 92 ಕೃಷಿ ಉತ್ಪನ್ನಗಳನ್ನು ಮಾರಾಟ ನಿಯಂತ್ರಣಕ್ಕೆ ಒಳಪಡಿಸಲಾಯಿತು.

ADVERTISEMENT

ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ 9 ಎಕರೆ ಜಾಗ ಗುರುತಿಸಲಾಗಿದೆ. ಈ ಜಾಗವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸ್ವಾಧೀನಕ್ಕೆ ಪಡೆಯಲು ₹15.20 ಲಕ್ಷವನ್ನು ಸಮಿತಿ ಕಾರ್ಯದರ್ಶಿ ಮೂಲಕ ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. ಆನಂತರದಲ್ಲಿ ಕಾಂಪೌಂಡ್, ಆಡಳಿತ ಕಚೇರಿ ಹಾಗೂ ಇತರೆ ಮಳಿಗೆ ನಿರ್ಮಾಣ ಕಾಮಗಾರಿಗಾಗಿ ಸರ್ಕಾರ ಪ್ರಾಥಮಿಕವಾಗಿ ₹4.50 ಕೋಟಿ ಮಂಜೂರು ಮಾಡಿತ್ತು. ಇದರಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ.

ಸಮ್ಮಿಶ್ರಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿಸರ್ಕಾರ ಆಡಳಿತಕ್ಕೆ ಬಂದ ನಂತರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧಿಸಿದ ಕಾಮಗಾರಿ ಮುಂದುವರೆಯಲಿಲ್ಲ. ಹಾಗಾಗಿ ಇಲ್ಲಿನ ಮಾರುಕಟ್ಟೆ ಕಾಂಪೌಂಡ್ ಗೋಡೆ ಬಿಟ್ಟರೆ ಉಳಿದ ಯಾವುದೇ ಅಭಿವೃದ್ಧಿ ಕೆಲಸ ಈವರೆಗೆ ಆಗಿಲ್ಲ.

ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆರ್ಥಿಕ ಸದೃಢತೆ ಹೊಂದಿಲ್ಲ ಎಂಬ ನೆಪವೊಡ್ಡಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವಿಲೀನಗೊಳಿಸಲಾಯಿತು.

ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಅಧಿಕಾರದಲ್ಲಿದೆ. ಇಲ್ಲಿನ ಮಾರುಕಟ್ಟೆಯನ್ನು ಅಧಿಕೃತ ಹಾಗೂ ವ್ಯವಸ್ಥಿತವಾಗಿ ಪ್ರಾರಂಭಿಸಿದ್ದರೆ ತಾಲ್ಲೂಕಿನ ರೈತರು ಸೇರಿದಂತೆ ಗಡಿಭಾಗದಲ್ಲಿನ ಅಕ್ಕಪಕ್ಕದ ರೈತರಿಗೂ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಈ ಭಾಗದ ರೈತರು ಮಾರುಕಟ್ಟೆಗೆ ಹೋಗಬೇಕೆಂದರೆ ಸುಮಾರು 60ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೋಗಬೇಕಿದೆ. ಮತ್ತೆ ಕೊರಟಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಮೊದಲ ಆಯವ್ಯಯದಲ್ಲಿ ಆದ್ಯತೆ ನೀಡಿ ಪುನರಾರಂಭವಾಗಬಹುದು ಎಂದು ತಾಲ್ಲೂಕಿನ ರೈತರು, ಸಾರ್ವಜನಿಕರು ನಿರೀಕ್ಷೆಯಲ್ಲಿದ್ದಾರೆ.

ವೆಂಕಟರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಬೈಚಾಪುರ.
ಮರುಡಪ್ಪ ರೈತ ದುಗ್ಗೇನಹಳ್ಳಿ 

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಕ್ಕೆ ಈ ಭಾಗದಲ್ಲಿ ಬೇಡಿಕೆ ಇದೆ. ಸ್ಥಗಿತವಾಗಿರುವ ಮಾರುಕಟ್ಟೆ ಮತ್ತೆ ಪ್ರಾರಂಭವಾದರೆ ಸಾಕಷ್ಟು ರೈತರಿಗೆ ಅನುಕೂಲ- ವೆಂಕಟರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ

ರೈತರ ಕೃಷಿ ಉತ್ಪನ್ನ ಮಾರಾಟಕ್ಕೆ ಸರಿಯಾದ ಜಾಗ ಇಲ್ಲ. ಇದ್ದ ಮಾರುಕಟ್ಟೆಯನ್ನು ತುಮಕೂರು ಮಾರುಕಟ್ಟೆಗೆ ವಿಲೀನ ಮಾಡಲಾಯಿತು. ಈಗಿನ ಸರ್ಕಾರ ಮತ್ತೆ ಮಾರುಕಟ್ಟೆ ಪ್ರಾರಂಭಿಸುವ ನಿರೀಕ್ಷೆ ಇದೆ- ಮರುಡಪ್ಪ ರೈತ ದುಗ್ಗೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.