ADVERTISEMENT

ಕುಣಿಗಲ್ | ದಾಖಲಾತಿ ಹೆಚ್ಚಳ: ಗ್ರಾಮೀಣ ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 15:27 IST
Last Updated 30 ಅಕ್ಟೋಬರ್ 2023, 15:27 IST
ಕುಣಿಗಲ್ ತಾಲ್ಲೂಕು ಜಾಣಗೆರೆ ಸರ್ಕಾರಿ ಶಾಲೆ ಬಸ್
ಕುಣಿಗಲ್ ತಾಲ್ಲೂಕು ಜಾಣಗೆರೆ ಸರ್ಕಾರಿ ಶಾಲೆ ಬಸ್    

ಕುಣಿಗಲ್: ತಾವು ಕಲಿತ ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳು ಶಾಲೆಗೆ ಬಸ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಟ್ರಸ್ಟ್‌ ಮೂಲಕ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ಶಾಲೆ ಗಮನ ಸೆಳೆಯುತ್ತಿದೆ.

ತಾಲ್ಲೂಕಿನ ಕೊತ್ತಗೆರೆ ಹೋಬಳಿ ಜಾಣಗೆರೆ ಹಿರಿಯ ಪ್ರಾಥಮಿಕ ಶಾಲೆ 1954ರಲ್ಲಿ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಕ್ರಮೇಣ ಸಂಖ್ಯೆ ಕ್ಷೀಣಿಸಿ 50ಕ್ಕೆ ಇಳಿದು ಮುಚ್ಚುವ ಹಂತಕ್ಕೆ ತಲುಪಿದಾಗ ಶಾಲೆ ಹಳೆ ವಿದ್ಯಾರ್ಥಿಗಳು ಸೇರಿ ತಾವು ಕಲಿತ ಶಾಲೆ ಉಳಿಯಲು ಯೋಜನೆಯೊಂದನ್ನು ರೂಪಿಸಿದರು.

ಹಳೆ ವಿದ್ಯಾರ್ಥಿಗಳು ಸೇರಿ ಜ್ಞಾನಜ್ಯೋತಿ ಎಜ್ಯುಕೇಷನಲ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದಾಗ ಆಂಗ್ಲಭಾಷಾ ವ್ಯಾಮೋಹ ಜತೆಗೆ ಎಲ್‌ಕೆಜಿ ಮತ್ತು ಯುಕೆಜಿ ಬಗ್ಗೆ ಒಲವು ತೋರಿದಾಗ ಮೂರು ಶಿಕ್ಷಕರನ್ನು ನೇಮಿಸಿ, ಆರಂಭಿಸಲಾಯಿತು. ಕಳೆದ ವರ್ಷ 28 ಮಕ್ಕಳು ದಾಖಲಾಗಿದ್ದು, ಟ್ರಸ್ಟ್ ವತಿಯಿಂದ ಅಟೊ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಪ್ರಸಕ್ತ ಸಾಲಿನಲ್ಲಿ 70 ಮಕ್ಕಳು ದಾಖಲಾದ ಕಾರಣ ಅಟೊಗಿಂತಲೂ ಬಸ್ ವ್ಯವಸ್ಥೆ ಮಾಡುವ ನಿರ್ಣಯವನ್ನು ಸಮಿತಿ ಪದಾಧಿಕಾರಿಗಳು ಕೈಕೊಂಡರು. ಇದಕ್ಕೆ ಶಾಸಕ ಡಾ.ರಂಗನಾಥ್, ಬಿಜೆಪಿ ಮುಖಂಡ ರಾಜೇಶ್ ಗೌಡ ಕೈ ಜೋಡಿಸಿದರು. ಜಾಣಗೆರೆ ಗ್ರಾಮದ ಸುತ್ತಮುತ್ತಲಿ ಬಿಳಿದೇವಾಲಯ, ಗುನ್ನಾಗರೆ, ಕೆಂಕೆರೆ, ದಾಸನಪುರ, ರಾಯಗೋನಹಳ್ಳಿ, ಕೋಡಿಪಾಳ್ಯದಿಂದಲೂ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ.

ಜ್ಞಾನಜ್ಯೋತಿ ಚಾರಿಟಬಲ್ ಟ್ರಸ್ಟ ಅಧ್ಯಕ್ಷ ವಿಜಯ್ ಮಡಕೆಹಳ್ಳಿ, ‘ ಉತ್ತಮ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ನೀಡಿದಾಗ ಶಾಲೆ ಉಳಿಯುತ್ತದೆ. ದುಬಾರಿ ವೆಚ್ಚವನ್ನು ಪೋಷಕರು ಭರಿಸುವುದು ತಪ್ಪುಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆಗೆ ಸಮಿತಿ ಶ್ರಮಿಸಲಿದೆ‘ ಎಂದರು.

ರಘು ಜಾಣಗೆರೆ ಮಾತನಾಡಿ, ಮುಖ್ಯ ಶಿಕ್ಷಕ ಬಿ.ಬಿ.ರಂಗಸ್ವಾಮಿ ಕಾಳಜಿಯಿಂದ ಹಳೆ ವಿದ್ಯಾರ್ಥಿಗಳು ಸೇರಿ ಸಮಿತಿ ರಚಿಸಿ ಶಾಲೆ ಪ್ರಗತಿಗೆ ಕಾರಣಕರ್ತರಾಗಿದ್ದಾರೆ ಎಂದರು.

ಮುಖ್ಯಶಿಕ್ಷಕ ಬಿ.ಬಿ.ರಂಗಸ್ವಾಮಿ, ಜಾಣಗೆರೆ ಸರ್ಕಾರಿ ಶಾಲೆ ಉಳಿವಿಗೆ ಹಳೆ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಸರ್ಕಾರದ ವತಿಯಿಂದ ಶಿಥಿಲವಾಗಿರುವ ಶಾಲೆ ಕೊಠಡಿಗಳನ್ನು ತೆರವು ಮಾಡಿ ಹೊಸಕಟ್ಟಡಕ್ಕೆ ವ್ಯವಸ್ಥೆ ಮಾಡಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.