ADVERTISEMENT

ಇಂದು ಜಿಲ್ಲಾ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 5:02 IST
Last Updated 25 ಜೂನ್ 2024, 5:02 IST
ಹೇಮಾವತಿ ಪೈಪ್‌ಲೈನ್ ಕಾಮಗಾರಿ
ಹೇಮಾವತಿ ಪೈಪ್‌ಲೈನ್ ಕಾಮಗಾರಿ   

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಜಿಲ್ಲಾ ಬಂದ್‌ಗೆ ಮಂಗಳವಾರ ಕರೆ ನೀಡಿದ್ದು, ವಿವಿಧ ಸಂಘ, ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

‘ಹೇಮಾವತಿ ನಾಲೆಯ ಮೂಲಕ ಕುಣಿಗಲ್‌ ಮಾರ್ಗವಾಗಿ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಬೇಕು. ಪೈಪ್‌ಲೈನ್ ಅಳವಡಿಸಿ ನೇರವಾಗಿ ನೀರು ಹರಿಸಲು ಅವಕಾಶ ನೀಡುವುದಿಲ್ಲ’ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಈಗಾಗಲೇ ಹಲವು ಹಂತಗಳಲ್ಲಿ ಹೋರಾಟ ಮಾಡಿಕೊಂಡು ಬರಲಾಗಿದೆ. ಮಂಗಳವಾರ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.

ಹೋರಾಟ ಸಮಿತಿಯ ಭಾಗವಾಗಿರುವ ಬಿಜೆಪಿ, ಜೆಡಿಎಸ್ ಈಗಾಗಲೇ ಬೆಂಬಲ ಸೂಚಿಸಿವೆ. ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ತೊಡಗಿಸಿಕೊಂಡಿವೆ. ರೈತ ಸಂಘಟನೆಗಳು, ವಕೀಲರ ಸಂಘ, ಆಟೊ ಯೂನಿಯನ್, ವಿವಿಧ ಮಠಾಧೀಶರು, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್‌ನಲ್ಲಿ ಭಾಗವಹಿಸಲಿವೆ.

ADVERTISEMENT

ಮಂಗಳವಾರ ಬೆಳಗ್ಗೆ 6 ಗಂಟೆಗೆ ನಗರದ ಬಿ.ಎಚ್.ರಸ್ತೆಯ ಎಸ್.ಎಸ್.ವೃತ್ತದಲ್ಲಿ ಹೋರಾಟಗಾರರು ಧರಣಿ ಆರಂಭಿಸಲಿದ್ದಾರೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಬಂದ್, ಹೋರಾಟ ಶಾಂತಿಯುತವಾಗಿ ಇರಲಿದೆ. ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೋರಾಟ ಸಮಿತಿ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟ ಮುಂದುವರಿದ ಬೆನ್ನಲ್ಲೇ ಈಚೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಭೆ ಬೆಂಗಳೂರಿನಲ್ಲಿ ನಡೆಯಿತು. ಯೋಜನೆ ಕೈಬಿಡುವಂತೆ ಮಾಡಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ತಾಂತ್ರಿಕ ಸಮಿತಿ ರಚಿಸಲು ನಿರ್ಧರಿಸಿದ್ದು, ಸಮಿತಿ ನೀಡಿದ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಈಗಾಗಲೇ ತಾಂತ್ರಿಕ ಸಮಿತಿ ರಚಿಸಿಯೇ ಯೋಜನೆ ಜಾರಿಗೆ ತರಲಾಗಿದೆ. ಇದಕ್ಕೆ ಜಿಲ್ಲೆಯ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗ ಮತ್ತೊಂದು ತಾಂತ್ರಿಕ ಸಮಿತಿ ರಚಿಸುವ ಅಗತ್ಯ ಇರಲಿಲ್ಲ. ಜನರ ಕಣ್ಣು ತಪ್ಪಿಸಿ ಯೋಜನೆ ಜಾರಿ ಮಾಡುವ ಹುನ್ನಾರ ನಡೆದಿದೆ. ಹಾಗಾಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕುಡಿಯುವ ನೀರು ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಿಲ್ಲ. ನಾಲೆ ಮೂಲಕ ತೆಗೆದುಕೊಂಡು ಹೋಗಲಿ. ಪೈಪ್‌ಲೈನ್ ಅಳವಡಿಸಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.