ತುಮಕೂರು: ಸಂವಹನ ಕೌಶಲ, ತಾಂತ್ರಿಕ ಜ್ಞಾನದ ತಿಳಿವಳಿಕೆಯ ಜತೆಗೆ ಆತ್ಮ ವಿಶ್ವಾಸವಿದ್ದರೆ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಳ್ಳಬಹುದು ಎಂದು ಬೆಂಗಳೂರಿನ ಆಲ್ಫಾ ಸ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎನ್.ಗೌರವ್ ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದಿಂದ ಆಯೋಜಿಸಿದ್ದ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಂವಹನ ಕೌಶಲ ಬೆಳೆಸಿಕೊಳ್ಳುವುದರಿಂದ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ. ಇಂಗ್ಲಿಷ್‍ನಲ್ಲಿ ಸಂವಹನ ನಡೆಸುವ ಪ್ರಾಥಮಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು. ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಹಂಬಲವಿರಬೇಕು. ಜೀವನ ನೆಲೆಗೊಳ್ಳುವ, ಉದ್ಯೋಗದ ಭದ್ರತೆ ಇರುವ ಕೆಲಸ ಆಯ್ಕೆ ಮಾಡಿಕೊಂಡರೆ ನಮ್ಮ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ‘ಕ್ಯಾಂಪಸ್ ನೇಮಕಾತಿ ಅಭಿಯಾನಕ್ಕೆ ಇಂದು ಮುನ್ನುಡಿ ಬರೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಉದ್ಯೋಗ ಮೇಳ ಆಯೋಜಿಸುವ ಗುರಿ ಹೊಂದಿದ್ದೇವೆ. ಪದವಿ ಮುಗಿಸುವ ಎಲ್ಲರೂ ಉದ್ಯೋಗ ಪಡೆದುಕೊಳ್ಳಬೇಕು’ ಎಂದರು.
ಕಲಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಚಾಲಕ ಕೆ.ವಿ.ಪದ್ಮನಾಭ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸಿ.ಶೋಭಾ, ಸಹಾಯಕ ಪ್ರಾಧ್ಯಾಪಕಿ ಈ.ವನಜಾಕ್ಷಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.