ADVERTISEMENT

ತುಮಕೂರು: ಕಾಲುವೆ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಕೊರತೆ

ರಾಜರೋಷವಾಗಿ ರಾಜಕಾಲುವೆ ಒತ್ತುವರಿ, ಸರ್ವೆಗೆ ಸೀಮಿತವಾದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಮೇ 2024, 7:46 IST
Last Updated 18 ಮೇ 2024, 7:46 IST
<div class="paragraphs"><p>ತುಮಕೂರಿನ ರಾಜಕಾಲುವೆ ಸ್ಥಿತಿ</p><p><br></p></div>

ತುಮಕೂರಿನ ರಾಜಕಾಲುವೆ ಸ್ಥಿತಿ


   

ತುಮಕೂರು: ನಗರದಲ್ಲಿರುವ ರಾಜಕಾಲುವೆಗಳು ಬಹುತೇಕ ಕಡೆಗಳಲ್ಲಿ ಒತ್ತುವರಿಯಾಗಿದ್ದು, ತೆರವುಗೊಳಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ‘ಕೇವಲ ಸರ್ವೆ ಮಾಡಿ, ವರದಿ ಸಿದ್ಧಪಡಿಸಲು ಮಾತ್ರ ಸೀಮಿತರಾಗಿದ್ದಾರೆ’ ಎಂಬುವುದು ಸಾರ್ವಜನಿಕರ ಆರೋಪ.

ADVERTISEMENT

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 42 ರಾಜ ಕಾಲುವೆಗಳಿದ್ದು, 7 ಕಿ.ಮೀ ಉದ್ದ ಇದೆ. ಎಲ್ಲ ಕಾಲುವೆಗಳು ಒತ್ತುವರಿಯಾಗಿದ್ದು, ಇದರಲ್ಲಿ ಈವರೆಗೆ 13 ಕಾಲುವೆಗಳು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 29 ಕಾಲುವೆಗಳ ಒತ್ತುವರಿ ತೆರವು ಮಾಡಿಲ್ಲ.

ಮಳೆ ಬಂದಾಗ ಪ್ರತಿ ಬಾರಿಯೂ ನೀರು ಸಂಪರ್ಕವಾಗಿ ಹರಿದು ಹೋಗದೆ ರಸ್ತೆ ಮೇಲೆ ನಿಲ್ಲುತ್ತದೆ. ಕೆಲವು ಕಡೆಗಳಲ್ಲಿ ಮನೆ, ಅಂಗಡಿ ಮಳಿಗೆಗಳಿಗೆ ನುಗ್ಗುತ್ತದೆ. ಇದರಿಂದ ನಗರದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಒಂದು ಸಣ್ಣ ಮಳೆಯಾದರೂ ನಗರದ ಅಂತರಸನಹಳ್ಳಿ ಕೆಳ ಸೇತುವೆ ಜಲಾವೃತವಾಗುತ್ತದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುತ್ತಾರೆ. ಅಂತರಸನಹಳ್ಳಿ ಭಾಗದಲ್ಲಿರುವ 3 ರಾಜಕಾಲುವೆಗಳು ಒತ್ತುವರಿ ಯಾಗಿವೆ. ರಾಜಕಾಲುವೆ ಜಾಗದಲ್ಲಿ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ತೊಂದರೆಯಾಗುತ್ತಿದೆ. ಗೆದ್ದಲಹಳ್ಳಿ ಭಾಗದ 10 ಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿವೆ.

ಶೆಟ್ಟಿಹಳ್ಳಿ, ಬಡ್ಡಿಹಳ್ಳಿ ಒಳಗೊಂಡಂತೆ ಕೆಲವೇ ಕಡೆಗಳಲ್ಲಿ ಮಾತ್ರ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದೆಡೆ ಒತ್ತುವರಿ ರಾಜಾರೋಷವಾಗಿ ಮುಂದುವರಿದಿದೆ. ವಿವಿಧೆಡೆ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡು ಬಡಾವಣೆ, ಕಾಂಪೌಂಡ್, ಶೆಡ್, ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಒತ್ತಡ, ಪ್ರಭಾವದಿಂದಾಗಿ ಒತ್ತುವರಿ ನೋಡಿಕೊಂಡು ಸುಮ್ಮನಿದ್ದಾರೆ.

‘ಇಲ್ಲದ ಉಸಾಬರಿ ನಮಗೇಕೆ’ ಎಂದು ತಮ್ಮ ಕೆಲಸದಿಂದ ಜಾರಿಕೊಳ್ಳುತ್ತಿದ್ದಾರೆ. ಕನಿಷ್ಠ ಒಂದು ನೋಟಿಸ್‌ ಜಾರಿ ಮಾಡಲು ಸಹ ಆಗುತ್ತಿಲ್ಲ. ‘ಪಾಲಿಕೆಯ ಆಯುಕ್ತರು ಸಭೆ ನಡೆಸಿ, ಸಲಹೆ ಸೂಚನೆ ನೀಡಲು ಮಾತ್ರ ಇಲ್ಲಿಗೆ ಬಂದಂತೆ ಕಾಣುತ್ತಿದೆ. ಒತ್ತುವರಿ ತೆರವು ವಿಷಯದಲ್ಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಪಾಲಿಕೆಯಲ್ಲಿ ಪ್ರತಿ ವಾರ ವಿಶೇಷ ಆಂದೋಲನ ಮಾಡಿ ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ರಿಯಾಯಿತಿ ನೀಡಿ ತೆರಿಗೆ ಕಟ್ಟುವಂತೆ ಪ್ರೇರೇಪಿಸುತ್ತಾರೆ. ತೆರಿಗೆ ವಸೂಲಿಗೆ ತೋರುವ ಆಸಕ್ತಿಯನ್ನು ಜನರ ಕೆಲಸದ ವಿಷಯದಲ್ಲಿ ಯಾಕೆ ತೋರುತ್ತಿಲ್ಲ? ತೆರಿಗೆಯ ಬಗ್ಗೆ ಇಷ್ಟೆಲ್ಲಾ ಯೋಚಿಸುವ ಆಯುಕ್ತರು, ರಾಜ ಕಾಲುವೆ ಒತ್ತುವರಿ ತೆರವಿಗೆ ಯಾಕೆ ಮುಂದಾಗುತ್ತಿಲ್ಲ?’ ಎಂದು ನಗರದ ನಿವಾಸಿ ರಮಾನಂದ್‌ ಪ್ರಶ್ನಿಸಿದರು.

‘ಮಳೆಯ ನೀರು ಮನೆಗೆ ನುಗ್ಗಿದಾಗ, ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಕಷ್ಟವಾದಾಗ ಮಾತ್ರ ಅಧಿಕಾರಿಗಳಿಗೆ ರಾಜಕಾಲುವೆ ನೆನಪಾಗುತ್ತದೆ. ಜನರಿಗೆ ಸಮಸ್ಯೆಯಾದಾಗ ಮಳೆಯಲ್ಲಿ ಕೊಡೆ ಹಿಡಿದು ಬಂದು ಫೋಟೊ ತೆಗೆಸಿಕೊಂಡು ಹೋಗುತ್ತಾರೆ. ನಂತರ ಅಲ್ಲಿನ ಜನರ ಪಾಡೇನು ಎಂಬುವುದರ ಬಗ್ಗೆ ತಲೆ ಕಡೆಸಿಕೊಳ್ಳುವುದಿಲ್ಲ’ ಎಂದು ಸದಾಶಿವನಗರದ ನಿವಾಸಿ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿಗೆ ನಗರದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದಂತಿಲ್ಲ. ಮಳೆಗಾಲದಲ್ಲಿ ಕಚೇರಿಯ ಎಸಿ ಕೋಣೆ ಬಿಟ್ಟು ಹೊರ ಬಂದು ನೋಡಿದರೆ ಸಾಮಾನ್ಯರ ಕಷ್ಟ ಅರಿವಿಗೆ ಬರುತ್ತದೆ. ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಮಳೆ ಬಂದಾಗ ಪ್ರತಿ ಸಾರಿ ಮನೆಯ ತುಂಬೆಲ್ಲ ನೀರು ತುಂಬಿರುತ್ತದೆ’ ಎಂದು ಗೆದ್ದಲಹಳ್ಳಿಯ ಶರಣಮ್ಮ ಪ್ರತಿಕ್ರಿಯಿಸಿದರು.

ಹಲವು ಕಡೆ ಚರಂಡಿ ಇಲ್ಲ
ನಗರದ ಎಲ್ಲ ರಾಜಕಾಲುವೆಗಳು ಮುಚ್ಚಿಕೊಂಡು ಹೋಗಿವೆ. ನೀರು ಸಮರ್ಪಕವಾಗಿ ಹರಿದು ಹೋಗಲು ಆಗುತ್ತಿಲ್ಲ. ಹಲವು ಕಡೆಗಳಲ್ಲಿ ಚರಂಡಿ ಇಲ್ಲದಂತಾಗಿದೆ. ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಜಿಲ್ಲಾ ಆಡಳಿತ, ಪಾಲಿಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜಕಾಲುವೆಗಳ ನಿರ್ವಹಣೆ ಮಾಡಬಹುದಿತ್ತು. ಆದರೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.-ಕುಂದರನಹಳ್ಳಿ ರಮೇಶ್‌, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ
ಇಚ್ಛಾಶಕ್ತಿ ಇಲ್ಲ
ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಮಳೆ ನೀರು ಮನೆ, ರಸ್ತೆಗೆ ನುಗ್ಗಿ ಅವಾಂತರವಾಗುತ್ತದೆ. ಅಧಿಕಾರಿಗಳು ಇದನ್ನು ತಪ್ಪಿಸಬೇಕಾಗಿದೆ. ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು.-ಇಮ್ರಾನ್‌ ಪಾಷ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.